ಕಲೆ : ಕಲೆಯ ಸ್ವರೂಪ-ಸಿದ್ಧಾಂತ ಮತ್ತು ಅಭಿವ್ಯಕ್ತಿ-ತಂತ್ರಗಳೆಂಬ ಎರಡು ಉಪಶೀರ್ಷಿಕೆಗಳಡಿಯಲ್ಲಿ ಕಲೆಯ ವಿಷಯವನ್ನು ಪರಿಶೀಲಿಸಲಾಗಿದೆ. ಕಲೆಯ ಚಾರಿತ್ರಿಕ ಬೆಳೆವಣಿಗೆ, ವಿವಿಧ ಶೈಲಿಗಳ ವಿಶ್ಲೇಷಣೆ- ಇವನ್ನು ವಿವಿಧ ದೇಶಗಳ ಕಲಾವಿಭಾಗದ ಅಡಿ ಕೊಡಲಾಗಿದೆ.

ಸ್ವರೂಪ-ಸಿದ್ಧಾಂತ
ಕಲೆಯೆಂಬುದು ಸರ್ವಸಾಮಾನ್ಯವಾದ ಪ್ರವೃತ್ತಿ. ಎಲ್ಲ ಕಾಲಗಳಲ್ಲೂ ಅದು ಕಾಣಿಸಿಕೊಂಡಿದೆ. ಮನುಷ್ಯನ ಸ್ವಭಾವದಲ್ಲೇ ಅದಕ್ಕೊಂದು ವ್ಯವಧಾನವಿದೆ. ಭಾವನಾಶಕ್ತಿ, ಆಲೋಚನಾ ಸಾಮರ್ಥ್ಯ, ರಸ ನಿಷ್ಪತ್ತಿ ಮತ್ತು ರಸಾಸ್ವಾದಗಳ ಸೌಕರ್ಯ, ಸೃಷ್ಟಿಮಾಡುವ ಸೌಲಭ್ಯ_ಇವು ಮನುಷ್ಯನಿಗಿರುವಂತೆ ಉಳಿದ ಯಾವ ಜೀವಿಗೂ ಇರದು. ಮಾನವವರ್ಗಕ್ಕೆ ಇಷ್ಟು ಪರಿಚಿತವಾದದ್ದಾದರೂ ಕಲೆಯ ಸ್ವರೂಪ ಸುಲಭವಾಗಿ ಅರ್ಥವಾಗದ್ದು. ಕಲೆಯ ಪರಿಕರಗಳನ್ನು ವಿಶ್ಲೇಷಣ ಮಾಡಿನೋಡುವುದು ಸಂಪೂರ್ಣವಾಗಿ ಸಾಧ್ಯವಾಗದ ಕೆಲಸ. ಪ್ರಾಚೀನರು ಮನುಷ್ಯ ಗಮ್ಯವಾದ ವಿವರಗಳನ್ನೆಲ್ಲ ಕಲೆ, ವಿದ್ಯೆ ಎಂದು ಇಬ್ಭಾಗವಾಗಿ ವಿಭಜನೆ ಮಾಡಿದರು. ವಿದ್ಯೆಯೆಂದರೆ ಅಭ್ಯಾಸಪ್ರಧಾನವಾಗಿ ಶಾಸ್ತ್ರಗಳನ್ನು ಆಲೋಚನೆ ಮಾಡಿ ಪ್ರೌಢಿಮೆಯನ್ನು ಪಡೆಯುವ ವಿಧಾನ. ವಿದ್ಯೆಯಿಂದ ಕೌಶಲವೊದಗುತ್ತದೆ. ಆದರೆ ಕಲೆ ಎಂಬುದು ಪ್ರತಿಭಾತಂತ್ರವಾದದ್ದು; ಸ್ವೋಪಜ್ಞೆಯಿಂದ ಅದರಲ್ಲಿ ಸಾಮರ್ಥ್ಯಒದಗುತ್ತದೆ. ಭಾರತೀಯರಲ್ಲಿ ಮೊದಮೊದಲಿಗೆ ಈ ವಿಭಾಗ ಅಷ್ಟು ಸ್ಪಷ್ಟವಾಗಿಲ್ಲ. ಹಲವಾರು ಸಂದರ್ಭಗಳಲ್ಲಿ ಅವನ್ನು ಏಕದೇಶೀಯವಾಗಿ ಪ್ರಯೋಗ ಮಾಡುತ್ತಾರೆ. ಆದರೂ ವಿವೇಚನೆಯೇನೋ ಉಂಟು. ನಿದರ್ಶನಕ್ಕೆ-ಧನುರ್ವಿದ್ಯೆ, ನಕ್ಷತ್ರವಿದ್ಯೆ, ಬ್ರಹ್ಮವಿದ್ಯೆ, ಪಾಕಕಲೆ, ಶಿಲ್ಪಕಲೆ, ನೃತ್ಯಕಲೆ, ಇತ್ಯಾದಿ. ಕ್ರಮೇಣ ಕಲೆಯೆಂಬ ಪದದ ಪ್ರಯೋಗ ಕುಶಲಕಾರ್ಯಗಳಿಗೆ ಸೀಮಿತವಾಯಿತು. ಪಾಶ್ಚಾತ್ಯ ದೇಶಗಳಲ್ಲಿ ಈ ವಿವೇಕ ಸ್ಪಷ್ಟವಾಗಿದೆ. 

ಕಲೆಯನ್ನು ಅವರು ಶಾಸ್ತ್ರದೃಷ್ಟಿಯಿಂದ ಪೃಥಕ್ಕರಿಸಿ ನಿಲ್ಲಿಸಿದರು. ಶಾಸ್ತ್ರವೆಂದರೆ ವಾಸ್ತವವಾದ ಸಂಗತಿಗಳ ಆಗುಹೋಗುಗಳನ್ನೂ ಕಾರಣ ಫಲಗಳನ್ನೂ ಯಥಾವತ್ತಾಗಿ, ಬುದ್ಧಿಶಕ್ತಿಯಿಂದ, ಪರಿಕರಗಳಿಂದ, ತಿಳಿಯುವುದು. ಅದರಲ್ಲಿ ಪ್ರಾಯೋಗಿಕವಾದ ಪ್ರಕಾರಕ್ಕೆ ಪ್ರಾಮುಖ್ಯ ಹೆಚ್ಚು. ಬಾಳಿನ ಸಂವಿಧಾನದಲ್ಲಿ ಅದನ್ನು ಅನ್ವಯಿಸಿಕೊಂಡರೂ ಜ್ಞಾನವೇ ಅದರ ಮುಖ್ಯ ಗುರಿ. ಆದರೆ ಕಲೆಯಲ್ಲಿ ಬದುಕಿನ ಬಗೆಗೆ ಪ್ರಾಶಸ್ತ್ಯ ಹೆಚ್ಚು. ಈ ದೃಷ್ಟಿಯಿಂದ ನೆಯ್ಗೆ, ಕಂಚುಗಾರಿಕೆ, ಪಾಕಕಲೆ, ನಗರ ನಿರ್ಮಾಣ ಕಲೆ ಮುಂತಾದ ಕಲೆಗಳು ಉಪಯುಕ್ತ ಕಲೆಗಳೆಂದೂ ಶಿಲ್ಪ, ಸಂಗೀತ, ಕವಿತೆ ಮುಂತಾದುವು ಲಲಿತ ಕಲೆಗಳೆಂದೂ ಹೇಳುತ್ತಾರೆ. ಪ್ರತಿಭೆಯನ್ನು ಮನುಷ್ಯ ಕಾರ್ಯ ಕೌಶಲಕ್ಕಾಗಿ ವಿನಿಯೋಗಿಸಿದರೆ ಅದು ಉಪಯುಕ್ತ ಕಲೆ. ಆನಂದವೊಂದಲ್ಲದೆ ಉಳಿದ ಯಾವ ನಿರ್ದಿಷ್ಟವಾದ ಪ್ರಯೋಜನವೂ ದೃಷ್ಟಿಯಲ್ಲಿರದೆ ಪ್ರತಿಭೆ ದುರ್ದಮ್ಯವಾಗಿ ಸೃಷ್ಟಿಯಲ್ಲಿ ಪರ್ಯವಸಾನವಾದರೆ ಅದು ಲಲಿತ ಕಲೆ.

ಪ್ರಕೃತಿಯಲ್ಲಿ ಸ್ವತಃ ರೂಪಿತವಾಗಿರದ ವಸ್ತುಗಳ ನಿರ್ಮಾಣವೇ ಕಲಾ ಸೃಷ್ಟಿ, ಪ್ರಕೃತಿಯೇ ಮಾಡಿದ ಪ್ರಸಂಗಗಳಾಗಲಿ, ವಸ್ತುಗಳಾಗಲಿ ಎಷ್ಟು ಸುಂದರವಾದರೂ ಕಲೆಯೆನಿಸಿಕೊಳ್ಳುವುದಿಲ್ಲ. ನಿದರ್ಶನಕ್ಕೆ ಹಿಮಾಲಯಪರ್ವತ, ಜೋಗದ ಜಲಪಾತ-ಇವನ್ನು ಕಲೆಯೆಂದು ಹೇಳಲಾಗುವುದಿಲ್ಲ. ಆದರೆ ಇವನ್ನೇ ಚಿತ್ರಣದ ಮೂಲಕ ಮಾತಿನ ಮೂಲಕ ಬಣ್ಣಿಸಿದಾಗ ಕಲೆಯೆನಿಸಿಕೊಳ್ಳುತ್ತವೆ. ಪ್ರಕೃತಿನಿಯಂತ್ರಿತ ಪ್ರವೃತ್ತಿಗಳಿಗೂ ಕಲೆಯೆನ್ನುವುದಿಲ್ಲ. ನಿದರ್ಶನಕ್ಕೆ ಅಶನ, ವಸನ, ಪಿಪಾಸೆ ಮುಂತಾದುವು. ಏಕೆಂದರೆ, ಅವುಗಳ ಆಕರ್ಷಣೆಯಲ್ಲಿ ರಮ್ಯತೆಯಲ್ಲಿ ಮನುಷ್ಯನ ಕೈವಾಡವಿರದು. ಪ್ರಕೃತಿಯಲ್ಲಿ ಇರದಿರುವುದನ್ನು ಮನುಷ್ಯ ತನ್ನ ಪ್ರತಿಭೆಯಿಂದ ಸೃಷ್ಟಿ ಮಾಡುವುದೇ ಕಲೆ ಎಂದು ಸ್ಯಾಮ್ಯುಯಲ್ ಜಾನ್ಸನನ ಅಭಿಪ್ರಾಯ. ಆದರೆ ಪ್ರಕೃತಿಯೆಂದರೇನು? ಪ್ರಕೃತಿಗೂ ಪ್ರತಿಭೆಗೂ ತಾರತಮ್ಯ ತೋರಿಸುವುದು ಹೇಗೆ? ಇದು ಜಿಜ್ಞಾಸೆಯ ವಿಷಯ. ಪ್ರತಿಭೆಯೂ ಪ್ರಕೃತಿಯ ಒಂದು ಪ್ರಕಾರವೆಂದು ವಾದಿಸುವವರಿದ್ದಾರೆ. ಕಲೆಯಲ್ಲಿ ಪ್ರಕೃತಿಯ ಪ್ರತಿಕೃತಿಯೇ ಮುಖ್ಯವಾದ ವಿಚಾರವೆಂದು ಅವರ ತರ್ಕ. ಕಲೆಯ ಆರಂಭವಾದದ್ದು ಪ್ರಕೃತಿಯ ಸ್ಫೂರ್ತಿಯಿಂದಲೇ ಎಂಬುದೂ ಒಪ್ಪತಕ್ಕ ವಿಚಾರ. 

ಸಾಮಾನ್ಯ ನಿರೂಪಣೆಯಲ್ಲಿ ಕಲೆ ಸಂವಿಧಾನದಿಂದ ನಿರ್ದಿಷ್ಟವಾಗುತ್ತದೆ. ಯಾವ ವಿಚಾರವನ್ನಾಗಲಿ, ನಿಯಮಬದ್ಧವಾಗಿ ಅನ್ವೇಷಣೆ ಮಾಡಿ ಸಕ್ರಮವಾಗಿ ರೂಪಿಸಿದಾಗ ಅದು ಕಲೆಯಾಗುತ್ತದೆ. ವಸ್ತುವಿನ ವಿಚಾರ ಗೌಣವಾದದ್ದು, ಪಾಕಶಾಸ್ತ್ರವೂ ಇದೆ, ಪಾಕಕಲೆಯೂ ಇದೆ. ಸಂಗೀತಶಾಸ್ತ್ರವೂ ಇದೆ, ಸಂಗೀತ ಕಲೆಯೂ ಇದೆ. ಹಾಗೆಂದೇ ವಿವಿಧ ವಸ್ತುಗಳನ್ನು ಆಳವಡಿಸಿ ಮಧ್ಯಯುಗದಲ್ಲಿ ಏಳು ಉದಾರ ಕಲೆಗಳನ್ನು (ಲಿಬರಲ್ ಆಟ್ರ್ಸ್‌) ವಿದ್ಯಾಲಯಗಳಲ್ಲಿ, ಬೋಧಿಸುತ್ತಿದ್ದರು. ವ್ಯಾಕರಣ, ತರ್ಕ, ವಾಗ್ಮಿತೆ (ಇವು ಮೂರು ತ್ರಿವರ್ಗ), ಜ್ಯಾಮಿತಿ, ಜ್ಯೋತಿಷ, ಸಂಗೀತ, ಗಣಿತ (ಇವು ನಾಲ್ಕು ಚತುರ್ವರ್ಗ). ಇಲ್ಲಿ ಕಲೆಯೆಂದರೆ ಶಾಸ್ತ್ರಗಳನ್ನೂ ಅಡಗಿಸಿಕೊಂಡು ಸಿದ್ಧವಾದ ವಿದ್ಯೆ. ಯಾವ ವಿದ್ಯೆಯೇ ಆಗಲಿ ಅನುರಕ್ತಿಯೊಡಗೂಡಿದ ವಿಶೇಷ ಅನ್ವೇಷಣೆಗೆ ಎಡೆ ಮಾಡಿಕೊಟ್ಟರೆ ಕಲೆಯಾಗುತ್ತದೆ. ಮುಖ್ಯವಾದ ವಿಚಾರವೆಂದರೆ ತದೇಕಚಿತ್ತ. ಬಟ್ಟೆಹಾಕುವುದು, ಉಣ್ಣುವುದು-ಇವು ಸಹ ಕಲೆಯಾಗಿ ಇರಬಹುದಲ್ಲವೆ.

ಕಲೆಯೆಂದರೆ ಇಂದು ಲಲಿತ ಕಲೆಯೇ. ಈ ಪದದ ಅರ್ಥವ್ಯಾಪ್ತಿ ಸಂಕುಚಿತವಾಗಿದೆ. ವಾಸ್ತುಶಿಲ್ಪ, ವರ್ಣಚಿತ್ರ, ರೇಖಾಚಿತ್ರ, ಸಂಗೀತ, ಕವಿತೆ-ಇವು ಲಲಿತ ಕಲೆಗಳೆಂದು ಇಂದು ಪರಿಗಣಿತವಾಗಿವೆ. ಮೊದಲ ನಾಲ್ಕು ದೃಶ್ಯಕಲೆಗಳು. ಅವು ನೋಡಲು ಹಿತವೆನಿಸುತ್ತವೆ. ಸಾಧಾರಣವಾಗಿ ಕಲೆಯೆಂದೊಡನೆ ಈ ದೃಶ್ಯಕಲೆಗಳೆಂದೇ ಬೋಧವಾಗುತ್ತದೆ. ಕಲೆಗಾರನೆಂದರೆ ಚಿತ್ರಕಾರನೇ, ಕಲೆಯೆಂದರೆ ಚಿತ್ರ, ಶಿಲ್ಪಕೃತಿಗಳೇ. ಲಲಿತಕಲೆಗಳಿಗೆ ಮೂಲ ಪ್ರತಿಭೆ. ಈ ಪ್ರತಿಭೆಯಿಂದ ಸಾಮಾನ್ಯ ವಸ್ತುವೂ ನವೋನವವಾಗಿ ರಮ್ಯವಾಗಿ ಕಾಣುತ್ತದೆ. 

 ದೃಷ್ಟ ಪೂರ್ವಾ„ಪಿ ಹ್ಯರ್ಥಾಃ 
 ಕಾವ್ಯೇ ರಸಪರಿಗ್ರಹಾತ್ 
 ಸರ್ವೇ ನವಾ ಇವಾ ಭಾಂತಿ 
 ಮಧುಮಾಸ ಇವ ದ್ರುಮಾಃ 

ಎಂದು ಕಾವ್ಯಕ್ಕೆ ಹೇಳಿದ ಮಾತನ್ನು ಎಲ್ಲ ಕಲೆಗಳಿಗೂ ಅನ್ವಯಿಸಬಹುದು. ರಮಣೀಯಾರ್ಥ ಪ್ರತಿಪಾದಕವಾದ ರೇಖಾವಿನ್ಯಾಸದಿಂದ. ವರ್ಣವಿನ್ಯಾಸದಿಂದ, ಶಬ್ದವಿನ್ಯಾಸದಿಂದ, ಸಹೃದಯನ ಹೃದಯವನ್ನು ಮಿಡಿಯುವ ಶಕ್ತಿ ಬರುವುದು ಈ ಪ್ರತಿಭೆಯಿಂದ. ಪ್ರತಿಭಾ ತಾರತಮ್ಯದಿಂದಲೇ ಕಲಾವಿದರ ಸ್ಥಾನಮಾನಗಳು ನಿರ್ದಿಷ್ಟವಾಗುವುದು. ಪ್ರತಿಭೆಯಿಲ್ಲದೆ ಅಭ್ಯಾಸ ಮಾತ್ರ ಇದ್ದರೆ ಕಲಾಸೃಷ್ಟಿ ಸಮರ್ಪಕವಾಗದು. ಕಲೆಗಾರನಿಗೆ ಕೈಚಳಕ ಮಾತ್ರ ಇದ್ದರೆ ಸಾಲದು; ನವನವೋನ್ಮೇಷಿಯಾದ ಪ್ರಜ್ಞೆಯೂ ಆವಶ್ಯಕ.

ಈ ಪ್ರತಿಭೆಯಿದ್ದರೆ ಸೃಷ್ಟಿಮಾಡುವ ಸ್ಫೂರ್ತಿಯೂ ಶಕ್ತಿಯೂ ತಾನಾಗಿ ಒದಗುತ್ತವೆ. ವಸ್ತುವಿನ ವಿವರಗಳನ್ನು ವಿಧವಿಧವಾಗಿ ವಿನ್ಯಾಸಮಾಡಿ ಸೌಂದರ್ಯನಿಷ್ಟತ್ತಿಯಿಂದ ತಾನೂ ಸುಖಪಟ್ಟು ಅದನ್ನು ಗ್ರಹಿಸುವ ಶಕ್ತಿಯಿರುವವರಿಗೂ ಸುಖಕ್ಕೆ ಎಡೆ ಮಾಡಿಕೊಡುವುದು ಕಲೆಗಾರನ ಕೆಲಸ. ಇದಕ್ಕೆ ಅಂಗವಾಗಿ ದರ್ಶನ ಮತ್ತು ವರ್ಣನಾ ಶಕ್ತಿಗಳು ಇರಬೇಕು. ವಸ್ತುವಿನ ಆಧ್ಯಾತ್ಮಿಕ ತಾತ್ಪರ್ಯವನ್ನು ಗ್ರಹಿಸುವ ಶಕ್ತಿಯೇ ದರ್ಶನ; ಅದನ್ನು ರಸಪುಷ್ಟಿಯಿಂದ ಹೇಳುವುದೇ ವರ್ಣನೆ. ದರ್ಶನಾದ್ವರ್ಣನಾಚ್ಚಾಥ ಲೋಕೇ ಕವಿಶ್ರುತಿಃ_ಎಂದು ಭಾರತೀಯ ಆಲಂಕಾರಿಕರು ಹೇಳುತ್ತಾರೆ. ಆದಿಕವಿಯಾದ ವಾಲ್ಮೀಕಿ ಋಷಿಯಾಗಿದ್ದುದರಿಂದ ದರ್ಶನವೇನೋ ಸ್ವಚ್ಛವಾಗಿತ್ತು; ಆದರೆ ಕ್ರೌಂಚ ಮಿಥುನದಲ್ಲಿ ಒಂದನ್ನು ಹೊಡೆದ ಬೇಡನಿಗೆ ಶ್ಲೋಕರೂಪವಾದ ಶಾಪವನ್ನು ಕೊಟ್ಟಾಗಲೇ ಲೋಕದಲ್ಲಿ ಕಲೆ ಉತ್ಪನ್ನವಾಯಿತು. (ನೋದಿತಾ ಕವಿತಾ ಲೋಕೇ ಯಾವಜ್ಜಾ ತಾ ನ ವರ್ಣನಾ). ದರ್ಶನ ಶಕ್ತಿಯನ್ನು ಕಲಿಯುವುದು ಸಾಧ್ಯವಿಲ್ಲ. ಪ್ರಕೃತಿಯಲ್ಲೇ ಮೂಲಭೂತವಾಗಿ_ಸ್ವರಸತ ಏವ_ಬಂದಿರಬೇಕು. ಆದರೆ ವರ್ಣನೆಯೆಂಬುದು ಭೌತರೂಪವನ್ನು ತಳೆಯುವುದರಿಂದ ಅದಕ್ಕೆ ವ್ಯಾಕರಣವುಂಟು. ಅದು ಉಪಾಧಿತಂತ್ರ. ಪ್ರತಿಯೊಂದು ಕಲೆಗೂ ಈ ವ್ಯಾಕರಣ ನಿರುಕ್ತಗಳು ಇದ್ದೇ ಇರುತ್ತವೆ. ಎಂಥ ಅಲೌಕಿಕವಾದ ದರ್ಶನವಿದ್ದರೂ ಪರಿಕರಗಳ ಸೌಲಭ್ಯವಿಲ್ಲದಿದ್ದರೆ, ಅಭ್ಯಾಸದ ಸಿದ್ಧಯಿಲ್ಲದಿದ್ದರೆ ಸೌಂದರ್ಯ ನಿಷ್ಪತ್ತಿ ಒದಗದು. ಎಲ್ಲ ಕಲೆಗಾರರಿಗೂ ಶಿಕ್ಷಣ ಮತ್ತು ವ್ಯವಸಾಯ_ಇವುಗಳು ಅನಿವಾರ್ಯವಾದ ಸಂಸ್ಕಾರಗಳು. ಕೆಲವು ವೇಳೆ ಈ ವ್ಯಾಕರಣವೇ ಭಾರವಾಗಿ ತಾತ್ಪರ್ಯವನ್ನು ಮರೆಯಿಸುವುದೂ ಉಂಟು. ಆದರೆ ಇದು ಸಲ್ಲದು. ಕೇವಲ ಉಪಾಧಿವಿಶಿಷ್ಟವಾದ ಕಲೆ ಕುಶಲತೆಯಾದರೂ ಲಲಿತಕಲೆಯಾಗದು.
ಕಲೆಯ ವಿಚಾರ ಪ್ರಸಾಪಿಸುವಾಗ ರುಚಿಯ ವಿಚಾರವೂ ಏಳುತ್ತದೆ. ಯುಗ ಧರ್ಮ, ಆಯಾ ಕಾಲದಲ್ಲಿ ಪ್ರಚಲಿತವಾದ ದೃಷ್ಟಿ, ಪಾರಿಶ್ರಮಿಕ ಸೌಲಭ್ಯ ನೆರೆನಾಡುಗಳ ಪ್ರಭಾವ, ಆರ್ಥಿಕ_ಔದ್ಯಮಿಕ ಪರಿಸ್ಥಿತಿ ಮುಂತಾದ ವಿವರಗಳನ್ನನುಸರಿಸಿ ಸಿದ್ಧವಾಗುವ ಈ ರುಚಿ ಜನಗಳ ಮನೋಧರ್ಮವನ್ನು ಅವಲಂಬಿಸಿರುತ್ತದೆ. ಈ ರುಚಿಗೆ ಸಮರ್ಪಕವಾಗಿ ಕಲೆಯ ರೀತಿ ಮೂಡುತ್ತದೆ. ಕೆಲವೊಮ್ಮೆ ಕಲಾವಿದರು ಯುಗ ಧರ್ಮವನ್ನು ಗ್ರಹಿಸಿ ಮುಂಬರಲಿರುವ ರುಚಿಯನ್ನು ನಿರೀಕ್ಷಿಸಿಯೇ ಕಲಾಸೃಷ್ಟಿ ಮಾಡುತ್ತಾರೆ. ಪ್ರಾಚೀನಯುಗದ ಗುಹಾ ಚಿತ್ರಗಳಲ್ಲಿ ಕಾಣಬರುವ ವಾಸ್ತವಿಕತೆ ಮತ್ತು ಪ್ರಸಂಗನಿರೂಪಣೆ, ಮಧ್ಯಯುಗದ ಮತಸಂಬಂಧವಾದ ವಾಸ್ತು ಮತ್ತು ಶಿಲ್ಪಗಳು, ಆಧುನಿಕ ಕಾಲದ ಘನಾಕೃತಿವಿಧಾನ (ಕ್ಯೂಬಿಸಂ), ಅತಿವಾಸ್ತವಿಕತೆ (ಸರ್ರಿಯಲಿಸಂ) ಪರಿಣಾಮ ವಿಧಾನ (ಇಂಪ್ರೆಷನಿಸಂ) ಮುಂತಾದ ಪ್ರಕಾರಗಳು ರುಚಿಯನ್ನೇ ಅವಲಂಬಿಸಿದ ಮಾರ್ಪಾಟುಗಳು. ರುಚಿ ತಲೆಮಾರುಗಳಲ್ಲಿ ಬೆಳೆಯದೆ ನಿಂತರೆ ಕಲೆಗೆ ಪ್ರಗತಿ ಒದಗದು. ರುಚಿಗೆ ಅಧೀನವಾಗಿ ರಸ ವ್ಯವಸ್ಥಿತವಾಗುತ್ತದೆ. ರಸ ನಿಷ್ಪತ್ತಿಮಾಡುವ ಕಲೆಗಾರನಿಗೂ ರಸಾಸ್ವಾದ ಮಾಡುವ ಸಹೃದಯನಿಗೂ ಸಂಬಂಧ ಏರ್ಪಡುವುದು ರುಚಿಯ ಆದಾರದ ಮೇಲೆ. ಇದಕ್ಕೆ ತಕ್ಕಂತೆ ವೀರಚಿತ್ರಗಳು, ಧಾರ್ಮಿಕ ಚಿತ್ರಗಳು, ಅಲಂಕರಣ, ಲಘುಗೀತ, ವೀರಕಾವ್ಯ ಮುಂತಾದುವು ಸೃಷ್ಟಿಯಾಗುತ್ತವೆ. ಸೌಂದರ್ಯ ಮೀಮಾಂಸೆಯಲ್ಲಿ ರುಚಿ ರಸಗಳಿರುವ ಅನ್ಯೋನ್ಯಾಶ್ರಯ ಜಿಜ್ಞಾಸೆಗೆ ಬರುತ್ತದೆ. ಈ ಅನ್ಯೋನ್ಯ ಸಂಬಂಧದಿಂದಾಗಿ ಕಲೆ ಸ್ವಕಲ್ಪಿತ ಸಂಕೇತ ಬದ್ಧವಾಗಿರುತ್ತದೆ. ಒಂದೊಂದು ಯುಗದಲ್ಲೂ ಸಂಕೇತಗಳ ಕಟ್ಟುಪಾಡು ಮಾರ್ಪಡುತ್ತ ಹೋಗುತ್ತದೆ. 

ಲಲಿತಕಲೆಗೂ ಪ್ರಯೋಜನವಿಲ್ಲದೆ ಇಲ್ಲ. ಆದಿವಾಸಿಗಳು ಗುಹಾಂತರ್ಗತ ಚಿತ್ರಗಳಲ್ಲಿ ರೇಖಾವಿನ್ಯಾಸಳಿಂದ ಬೇಟೆಯ ಪ್ರಸಂಗಗಳನ್ನು ನಿರೂಪಿಸಿದ್ದಾರೆ. ರಸ_ರುಚಿಗಳಿದ್ದರೂ ಪ್ರಮುಖವಾಗಿ ಇವು ಐಂದ್ರಜಾಲಿಕ ವಿಧಾನಗಳೆಂದು ಭಾವಿಸಲಾಗಿದೆ. ಪ್ರಾಚೀನ ಕ್ರೈಸ್ತ ಮಂದಿರಗಳಲ್ಲಿ, ಸಮಾಧಿ ಭವನಗಳಲ್ಲಿ ಮಂತ್ರ, ತಂತ್ರ, ಪ್ರಾರ್ಥನೆಗಳಿಗೆ ಸಂಬಂಧಪಟ್ಟಂತೆ ವಾಸ್ತು, ಶಿಲ್ಪ, ಚಿತ್ರಗಳು ಮೂಡಿಬಂದಿವೆ. ದೇವತಾ ಮೂರ್ತಿಗಳಿಂದ ಪ್ರಯೋಜನವುಂಟೆಂದೂ ಇಲ್ಲವೆಂದೂ ಆ ಕಾಲದಲ್ಲೇ ಗೊಂದಲ ಎದ್ದಿತು. ಆ ಕಾಲದ ಕಲಾಕೃತಿಗಳೆಲ್ಲ ಧರ್ಮಕ್ಕೆ ಮೀಸಲಾಗಿದ್ದುವು. ಇಸ್ಲಾಮೀ ಧರ್ಮಗ್ರಂಥಗಳಲ್ಲಿ ಕಂಡುಬರುವ ಸೊಗಸಾದ ಲತಾ ವಿನ್ಯಾಸದ ಅಲಂಕರಣಗಳು, ಜೈನ ಕಲ್ಪಸೂತ್ರದ ತಾಳಪತ್ರ ಪ್ರತಿಗಳಲ್ಲಿರುವ ಚಿತ್ರಗಳು, ಅಜಂತ ಗುಹೆಯ ಭಿತ್ತಿ ಚಿತ್ರಗಳು, ಭಾರತೀಯ ದೇವಾಲಯಗಳ ಶಿಲ್ಪಗಳು-ಇವುಗಳನ್ನೂ ತೀರ ಶುದ್ಧಕಲೆಯೆನ್ನಲಾಗದು.

ಕಲೆಗಾರನಿಗೆ ಪ್ರೋತ್ಸಾಹ ಕೊಟ್ಟು ಅವನಿಗೆ ನೆರವಾಗಿ ಕಲಾಸೃಷ್ಟಿ ಮಾಡಿಸುವ ಶ್ರೀಮಂತರ ವಿಚಾರವನ್ನೂ ಈ ಸಂದರ್ಭದಲ್ಲಿ ಹೇಳಬೇಕು. ಅತಿ ಪ್ರಾಚೀನ ಕಲೆಯನ್ನು ಬಿಟ್ಟರೆ ಮಧ್ಯಯುಗದಲ್ಲೂ ಈಗಿನ ಯುಗದಲ್ಲೂ ಇಂಥ ಆಶ್ರಯದಾತರ ಅಗತ್ಯ ಕಲೆಗಾರನಿಗಿದ್ದೇ ಇತ್ತು. ಐರೋಪ್ಯ ಕಲೆಗಾರರಿಗೆ ಕ್ರೈಸ್ತ ಮಠಗಳು ತುಂಬ ಉತ್ತೇಜನವನ್ನಿತ್ತಿವೆ. ಪ್ರಾಚೀನ ಕ್ರೈಸ್ತ ಕಲೆಯ ಸಂಪ್ರದಾಯದಲ್ಲಿ, ಎಂದರೆ ೩೧೩ರಲ್ಲಿ ಕಾನ್ ಸ್ಟೆಂಟೈನನ ಘೋಷಣೆಯಾದಾಗಿನಿಂದ ೮೦೦ರಲ್ಲಿ ಷಾರ್ಲಮಾನ್ ರಾಜ್ಯವನ್ನು ಪುನಃ ಸ್ಥಾಪನೆ ಮಾಡುವವರೆಗೆ, ಅಲೆಗ್ಸಾಂಡ್ರಿಯ ಶಾಖೆ, ಈಜಿಪ್ಟಿನ ಕಾಪ್ಟಿಕ್ ಕಲೆ; ಸಿರಿಯ, ಏಷ್ಯಮೈನರ್, ಮೆಸೊಪೊಟೇಮಿಯದ ಹೆಲನಿಸ್ಟ್‌ ಕಲೆ, ಆರ್ಮಿನಿಯನ್ ಚರ್ಚುಗಳ ಕಲೆ, ರೋಮನ್ ಸಮಾಧಿಗಳಲ್ಲಿ ಕ್ರೈಸ್ತಪ್ರಸಂಗಗಳ ಚಿತ್ರಣ, ಕಪ್ಪಡೋಸಿಯದ ಏಕಶಿಲಾಕ್ರೈಸ್ತ ಮಂದಿರಗಳಲ್ಲಿರುವ ಭಿತ್ತಿಚಿತ್ರಗಳು, ಕೆಲ್ಟಿಕ್ ಮತ್ತು ಘ್ರಾಂಕಿಷ್ ಕಾಲದ ಚಿತ್ರದ ಹಸ್ತಪ್ರತಿಗಳು_ ಮುಂತಾದ ಕಲಾಕೃತಿಗಳಿಗೆಲ್ಲ ಕ್ರೈಸ್ತಮಠಾಧಿಪತಿಗಳೇ ಆಶ್ರಯದಾತರು. ಇಸ್ಲಾಮೀ ಮತ್ತು ಬಿeóÁಂ ಟಿನ್ ಕಲೆಗಳಿಗೆ ರಾಜರು, ಅಧಿಕಾರಿಗಳು, ಶ್ರೀಮಂತರು ಪ್ರೋತ್ಸಾಹವನ್ನಿತ್ತರು. ೩೩೦ರಿಂದ ೧೪೫೩ರ ವರೆಗೆ ಪೌರಸ್ತ್ಯ ರೋಮನ್ ¸ಮ್ರಾಜ್ಯದ ರಾಜಧಾನಿಯಗಿದ್ದ ಕಾನ್ಸ್ಟೆಂಟಿನೋಪಲ್ ಕಲೆಗೆ ತೌರೂರಾಗಿದ್ದುದು ಇದೇ ಕಾರಣದಿಂದ. ಹೀಗೆಯೇ ೯ನೆಯ ಶತಮಾನದ ಮಧ್ಯಭಾಗದಲ್ಲಿ ಇಸ್ಲಾಮೀ ಕಲೆಯ ಸಮರ್ರಾ ಶೈಲಿ ಪ್ರವರ್ತಿತವಾದದ್ದು ಟ್ಯುಲ್ಯುನಿಡಿಸ್ ಎಂಬ ಸೇನಾನಿಯಿಂದ. ಇಸ್ಲಾಮೀ ಕಲೆಗೆ ಕೈರೋ ಮತ್ತು ಪರ್ಷಿಯಗಳು ಕೇಂದ್ರ ಸ್ಥಳಗಳಾಗಿದ್ದುದೂ ರಾಜರ ಆಶ್ರಯದಿಂದ. ಭಾರತದಲ್ಲಿ ಕೂಡ ಅಶೋಕ, ಕನಿಷ್ಕರ ಆಶ್ರಯದಲ್ಲಿ ಶಿಲ್ಪವೂ ಮುಂದೆ ಗುಪ್ತ, ಶುಂಗ, ಚೋಳ, ಪಾಂಡ್ಯ, ಹೊಯ್ಸಳ, ರಜಪುತ ರಾಜರ ಆಶ್ರಯದಲ್ಲಿ ವಾಸ್ತು, ಶಿಲ್ಪ, ಚಿತ್ರಕಲೆಗಳೂ ಅಭ್ಯುದಯವನ್ನು ಪಡೆದುವು. ಕಲಾಭಿಮಾನಿಗಳಾದ ಶ್ರೀಮಂತ ಗೃಹಸ್ಥರು ಕಲಾಕೃತಿಗಳನ್ನು ತಮ್ಮ ಗೃಹಗಳ ಅಲಂಕರಣಕ್ಕಾಗಿ ಕೊಂಡು ಕಲಾವಿದರನ್ನು ಪ್ರೋತ್ಸಾಹಿಸುವ ಪದ್ಧತಿ ಎಲ್ಲ ಕಾಲಗಳಲ್ಲೂ ಎಲ್ಲ ದೇಶಗಳಲ್ಲೂ ನಡೆದುಬಂದಿದೆ. ಶ್ರೀಮಂತರ ಪರಿವಾರದಲ್ಲಿ, ರಾಜಾಸ್ಥಾನಗಳಲ್ಲಿ ಕಲೆಗಾರರನ್ನು ನಿಯಮಿಸಿಕೊಳ್ಳುವ ಸಂಪ್ರದಾಯವೂ ವಿಸ್ತೃತವಾದದ್ದು. ಸರ್ಕಾರದವರು ಈ ಆಶ್ರಯದ ಅಗತ್ಯವನ್ನು ಮನಗಂಡು ಅಕೆಡಮಿಗಳನ್ನು ವ್ಯವಸ್ಥೆ ಮಾಡಿದ್ದಾರೆ. (ನೋಡಿ- ಅಕೆಡಮಿಗಳು). ಭಾರತ ಸರ್ಕಾರದವರು ಕೂಡ ಲಲಿತಕಲಾ ಅಕಾಡಮಿಯನ್ನು ಕೇಂದ್ರದಲ್ಲೂ ರಾಜ್ಯ ಸರ್ಕಾರಗಳು ರಾಜ್ಯಗಳಲ್ಲೂ ಏರ್ಪಡಿಸಿದ್ದಾರೆ. ಉತ್ತೇಜನ, ಆಲಂಬನಗಳಿಲ್ಲದೆ ಕಲೆ ಅರಳದು ಎಂಬ ಕಲ್ಪನೆ ಇದಕ್ಕೆ ಮೂಲ. ನಮ್ಮವರು ವಿನಾಶ್ರಯಂ ನ ಶೋಭಂತೇ ಎಂದು ಕವಿತೆಗೆ, ಲತೆಗೆ, ಪಂಡಿತರಿಗೆ ಹೇಳಿದ ಮಾತು ಎಲ್ಲ ಕಲೆಗಳಿಗೂ ಅನ್ವಯವಾಗುತ್ತದೆ.

ಹೀಗೆ ಕಲೆ ಜನಜೀವನದಲ್ಲಿ ಅಗತ್ಯವಾದ, ಉಪಯುಕ್ತವಾದ ಪಾತ್ರವನ್ನು ವಹಿಸಿ ಬೆಳೆದುಬಂದಿದೆ. ಸೌಂದರ್ಯಸೃಷ್ಟಿಯಿಂದ ಸಹೃದಯನಿಗೆ ಅವ್ಯಾಜವಾದ ಆನಂದವನ್ನು ಒದಗಿಸುವುದು ಕಲೆಯ ಜೀವಾಳವಾದರೂ ಈಚೆಗೆ ಉದ್ಯಮದಲ್ಲೂ ಈ ಅನುಭವದ ಆವೇಶವಿರಬೇಕೆಂಬ ನಿಲವು ಕಾಣುತ್ತದೆ. ಕಲೆಯಿಲ್ಲದ ಉದ್ಯಮ ಪಾಶವೀ ರೀತಿಯದು ಎಂಬ ದೃಷ್ಟಿಯಿಂದ ಕಲೆಯಲ್ಲಿ ಹೊಸ ಚೈತನ್ಯ ಮೂಡಿ ಬಂದಿದೆ. ಕಲೆಯ ಆಕರ ಭಾವೋದ್ರೇಕ, ಸಾಧನ ಸದ್ಯೋಬುದ್ಧಿ ಎಂದು ಒಪ್ಪಿದರೂ ಕಲೆಯಲ್ಲಿ ಸಂಸ್ಕೃತಿಗೆ ಸಹಕಾರಿಯಾಗಿ ನಿಲ್ಲುವ ಪ್ರಯೋಜನವಿದೆ ಎಂದು ಗ್ರಹಿಸಬೇಕು.  (ಎಸ್.ವಿ.ಆರ್.; ಎಸ್.ಕೆ.ಆರ್.)

ಸಂಕ್ಷೇಪವಾಗಿ ಹೇಳುವುದಾದರೆ ಕಲೆ ಕಲೆಗಾರನ ಪ್ರತಿಭೆಯಿಂದ ಹೊರಬಿದ್ದ ಒಂದು ಕೃತಕ ಸೃಷ್ಟಿಯೆಂದೂ ತನ್ಮೂಲಕ ಪ್ರತಿಭೆಯ ಸಂಪರ್ಕವನ್ನು ಕಲಾವಿಲಾಸಿಗೆ ಒದಗಿಸಿ ಅವನಲ್ಲಿ ಪ್ರಜ್ಞೋತ್ಕರ್ಷ ಶಕ್ತಿಯ ಅಭಿವ್ಯಕ್ತಿ ಮತ್ತು ಉಪಯೋಗ ನಾನಾ ಸ್ಥರಗಳಲ್ಲಿ ಆಗಬಹುದು. ಇವು ಕಾಲ, ದೇಶ, ವ್ಯಕ್ತಿಗಳ ಬುದ್ಧಿಮತ್ತೆ ಮತ್ತು ಉದ್ದೇಶ ಮುಂತಾದ ಅಂಶಗಳನ್ನು ಅವಲಂಬಿಸಿರುತ್ತವೆ. ಅಪ್ರತಿಮ ಪ್ರತಿಭಾವಂತನ ಸೃಷ್ಟಿ ನವನವೋನ್ಮೇಷಶಾಲಿನಿಯಾಗಿರಬಲ್ಲುದಾದರೆ, ಅಲ್ಪ ಪ್ರತಿಭೆಯುಳ್ಳವನ ಸೃಷ್ಟಿ ಕೇವಲ ತಂತ್ರಚಾತುರ್ಯ ಪ್ರದರ್ಶನದಲ್ಲೋ ಅನುಕರಣದಲ್ಲೋ ಮುಗಿದುಹೋಗಬಹುದು. ಹಾಗೆಯೇ ಸಾಮಾನ್ಯತಃ ಎಲ್ಲ ಕಲಾಸೃಷ್ಟಿಗೂ ಲಕ್ಷ್ಯನಾದ ಸಹೃದಯ ಪ್ರತಿಭಾವಂತನಾದ ಕಲೆಗಾರನ ಮಟ್ಟಕ್ಕೇ ಏರಿ ಅವರ್ಣನೀಯ ರಸಾನಂದವನ್ನು ಅನುಭವಿಸಬಹುದು; ಇಲ್ಲವೇ ಕಲೆಯ ಪ್ರಜಾಪ್ರಬೋಧನ ಶಕ್ತಿಯನ್ನು ಧಾರ್ಮಿಕ_ಸಾಮಾಜಿಕ ರಂಗದ ಗುರಿಗಳಿಗೆ ಸಾಧನವಾಗಿ ಮಾಡಿಕೊಳ್ಳಬಹುದು. ಅಥವಾ ಅದಕ್ಕೂ ಕೆಳಮಟ್ಟದಲ್ಲಿ ಸಿರಿಯ ಅಥವಾ ಗರಿಮೆಯ ಸೂಚಕವಾಗಿಯೋ ಅಥವಾ ಆರ್ಥಿಕ ಲಾಭಕ್ಕಾಗಿಯೋ ಬಳಸಬಹುದು. ಕಲಾಭಿವ್ಯಕ್ತಿಯಲ್ಲಿ ರೂಪಣ, ಉದ್ಧೇಶ್ಯ, ಉದ್ದಿಷ್ಟ ವಸ್ತು-ಇವು ಮೂರು ಪರಸ್ಪರ ಪ್ರಭಾವಿಗಳೂ ಹೌದು.

ಅಭಿವ್ಯಕ್ತಿ - ತಂತ್ರ
ಕಲಾಸೃಷ್ಟಿಯಲ್ಲಿ ಪ್ರಭಾವ ಬೀರುವ ಇನ್ನೊಂದು ಮುಖ್ಯ ಅಂಶ ತಂತ್ರ. ಇದು ನಿರೂಪಣೆಗೆ ಉಪಯೋಗಿಸುವ ಮೂಲಸಾಮಗ್ರಿ ಮತ್ತು ಕಲಾರೀತಿಯನ್ನು ಅವಲಂಬಿಸಿರುತ್ತದೆ. ಮೂಲಸಾಮಗ್ರಿಯ ಉಪಯೋಗ, ದೇಶ, ಕಾಲ, ಸಂಪ್ರದಾಯ ಇವುಗಳ ಹಿಡಿತದಲ್ಲಿರುತ್ತದೆ. ಉದಾಹರಣೆಗೆ ಅಮೃತಶಿಲೆ ದೊರೆಯದಿರುವ ದೇಶಗಳಲ್ಲಿ ಆ ಪದಾರ್ಥದ ಬಳಕೆಯನ್ನೂ ಅತಿಮಳೆಯಿರುವಲ್ಲಿ ಮಣ್ಣು ಅಥವಾ ಇಟ್ಟಿಗೆಯ ಕಟ್ಟಡಗಳನ್ನೂ ಕಾಣುವುದು ಅಪರೂಪ. ಲೋಹವನ್ನು ಕರಗಿಸುವ ತಂತ್ರವೇ ಬೆಳೆಯದಿದ್ದ ಕಾಲದಲ್ಲಿ ಲೋಹದ ಕಲಾಕೃತಿಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಹಾಗೆಯೇ ಸಾಂಪ್ರದಾಯಿಕ ಪರಿಸರದಲ್ಲೇ ಬೆಳೆದಿರುವ ಪ್ರಾಚೀನಭಾರತದ ಕಲೆಯಲ್ಲಿ ಸಂಪ್ರದಾಯಬಾಹಿರವಾದ ಕಬ್ಬಿಣ, ಗಾಜು ಮುಂತಾದ ವಸ್ತುಗಳ ಕಲಾಕೃತಿಗಳನ್ನು ಹೆಚ್ಚು ನಿರೀಕ್ಷಿಸುವುದೂ ಕಷ್ಟ.. ಆದರೆ ಕಾಲಕಾಲಕ್ಕೆ ಜನರ ಸಂಪತ್ತು, ಸಾಧನಗಳು ಮತ್ತು ಜ್ಞಾನ ಬೆಳೆದಂತೆ ಹೊಸ ಹೊಸ ರೀತಿಯ ಸಾಮಗ್ರಿಗಳು ಬಳಕೆಗೆ ಬರಬಹುದು. ಅಲ್ಯುಮಿನಿಯಂ, ತಂತಿ, ಕಾಂಕ್ರೀಟ್, ಮಾಸೋನೈಟ್, ಪೆಪಿಯರ್ಮೆಷೇ ಮುಂತಾದ ಇತ್ತೀಚಿನ ಕಲೆಗಾರನ ಹೊಸ ಸಾಮಗ್ರಿಗಳು ಇದಕ್ಕೆ ಉದಾಹರಣೆ. ತಂತ್ರದ ಆಳವಡಿಕೆಗೆ ಕಲಾರೀತಿ ಮತ್ತೂ ಮುಖ್ಯ. ವಾಸ್ತುಕಲೆಗೆ ಒಂದು ತಂತ್ರವಾದರೆ, ಶಿಲ್ಪಕ್ಕೆ ಬೇರೆ ತಂತ್ರ ಬೇಕಾಗುತ್ತದೆ. ಇದೇ ರೀತಿ ಚಿತ್ರಕಲೆ, ಸಂಗೀತ, ನೃತ್ಯ ಇವುಗಳಲ್ಲಿ ಉಪಯೋಗಿಸುವ ತಂತ್ರಗಳೂ ಭಿನ್ನವಾದುವು. ಆದ್ದರಿಂದ ತಂತ್ರಗಳನ್ನು ಕಲಾರೀತಿಗೆ ಅನುಸಾರವಾಗಿ ಬೇರೆ ಬೇರೆಯಾಗಿಯೇ ಗಮನಿಸಬೇಕಾಗುತ್ತದೆ. 

ವಾಸ್ತು ಕಲೆ
ಅನುಕೂಲಕರವಾದ ಆವರಣ ಮತ್ತು ಆಕರ್ಷಕ ವಿನ್ಯಾಸವಿದ್ದು ಭದ್ರವಾಗಿರುವ ಕಟ್ಟಡವೇ ಉತ್ತಮ ವಾಸ್ತುರಚನೆ. ಮೊದಲಾಗಿ ವಿಶಾಲ ಪ್ರದೇಶದಲ್ಲಿ ವೃತ್ತ, ಆಯ ಅಥವಾ ಚೌಕಾದಿ ಸೀಮಿತ ಆಕಾರವನ್ನು ಗುರುತಿಸುವಾಗ ವಾಸ್ತು ಶಿಲ್ಪಿಯ ಕೆಲಸ ಆರಂಭವಾಗುತ್ತದೆ. ಕಟ್ಟಡವನ್ನು ಎತ್ತರಿಸುವಾಗ ಪುನಃ ವಿಶಾಲ ತೆರಪಿನಲ್ಲಿ ಗೋಡೆ, ಕಮಾನು, ಗೋಪುರ ಮುಂತಾಗಿ ಒಂದು ಸೀಮಿತ ಫನಾಕೃತಿ ನಿರ್ಮಿಸುವುದರಿಂದ, ಆಕೃತಿ ಆಕಾಶದ ವೈಶಾಲ್ಯದಲ್ಲಿ ಲೀನವಾಗದೆ ಸತ್ವವನ್ನು ಉಳಿಸಿಕೊಳ್ಳುವಂತೆ ಗಮನಿಸಬೇಕಲ್ಲದೆ, ಉದ್ದ, ಅಗಲ, ಎತ್ತರಗಳ ಹಿತ ಪ್ರಮಾಣವನ್ನೂ ಸಾಧಿಸಬೇಕು. ಮತ್ತೆ ದೂರದಿಂದ ನೋಡುವವರಿಗೆ ಆಕರ್ಷಕವಾಗಿರುವಂತೆ ಹೊರಮೈ ವಿನ್ಯಾಸವನ್ನೂ ಹತ್ತಿರದಿಂದಲೂ ಸುಂದರವಾಗಿರುವಂತೆ ಘನ (ಮಾಸ್) ಮತ್ತು ತೆರಪುಗಳ (ವ್ಯಾಕ್ಯೂಂ) ಸಮತೋಲವನ್ನೂ ಕಾಪಾಡಬೇಕು. ಅನುಕೂಲದ ದೃಷ್ಟಿಯಿಂದ ಕಟ್ಟಡದ ವಿವಿಧ ಭಾಗಗಳ ಸಾಮೀಪ್ಯ_ದೂರವನ್ನು ಗಾಳಿ, ಬೆಳಕು, ನೀರಿಗೆ ತಡೆ_ಅವಕಾಶವನ್ನೂ ಯೋಜಿಸಬೇಕು. ಭದ್ರತೆಯ ದೃಷ್ಟಿಯಿಂದ, ನೆಲ, ಸಾಮಗ್ರಿಗಳ ಶಕ್ತಿ_ಸ್ವಭಾವ, ರಚನಾವಿನ್ಯಾಸದಿಂದಾಗುವ ಭಾರದ ವಿತರಣೆ_ವೈಪರೀತ್ಯ ಮುಂತಾದ ಅಂಶಗಳನ್ನು ಗಮನಿಸಬೇಕು. ಸೌಂದರ್ಯ, ಅನುಕೂಲ, ಭದ್ರತೆ_ಈ ಮೂರು ಅಂಶಗಳನ್ನೂ ತೃಪ್ತಿಕರವಾಗಿ ಸಾಧಿಸುವುದೇ ವಾಸ್ತು ತಂತ್ರದ ಮೂಲಸೂತ್ರ. ಈ ಸಾಧನೆಗೆ ಮಾರ್ಗಗಳನ್ನು ಹಲವೆಡೆ ಹಲವು ರೀತಿಯಲ್ಲಿ ವಾಸ್ತುಶಿಲ್ಪಿಗಳು ಕಂಡುಹಿಡಿದಿದ್ದಾರೆ. ಆದರೆ ಕಾಲಕಾಲಕ್ಕೆ ಜನಜೀವನದ ರೀತಿ_ನೀತಿ, ಬೇಕು_ಬೇಡಗಳು ವ್ಯತ್ಯಾಸವಾದಂತೆಲ್ಲ ತಂತ್ರಗಳೂ ಬದಲಾಯಿಸಬೇಕಾಗುತ್ತದೆ. ಹೊಸ ಹೊಸ ಸಂದರ್ಭಗಳಿಗೆ ಸಾಮಗ್ರಿಗಳ ಆಯ್ಕೆ ಮತ್ತು ವಿನ್ಯಾಸದ ಮಾರ್ಪಾಡುಗಳಿಂದ ಪರಿಹಾರವನ್ನು ಯೋಜಿಸಬೇಕಾಗುತ್ತದೆ. ವಾಸ್ತು ಸಾಮಗ್ರಿಗಳು ಪುರಾತನ ಕಾಲದ ಎಲೆ, ಕಡ್ಡಿ, ಗರಿ, ಮರದಿಂದ ಹಿಡಿದು ಮಣ್ಣು, ಇಟ್ಟಿಗೆ, ಕಲ್ಲಿನ ಮೂಲಕ ಈಚೆಗೆ ಕಬ್ಬಿಣ, ಕಾಂಕ್ರೀಟಿನವರೆಗೆ ಬದಲಾಗುತ್ತ ಬಂದಿವೆ. ಹಾಗೆಯೇ ರಚನಾವಿನ್ಯಾಸದಲ್ಲಿ ಪ್ರಾಗೈತಿಹಾಸಿಕ ಕಾಲದಲ್ಲಿ ಮೊದಮೊದಲು ಗರಿ, ಚರ್ಮ ಅಥವಾ ಎಲೆಗಳ ಒಪ್ಪಾರು, ಇಪ್ಪಾರು ಇದ್ದರೆ ಅನಂತರ ಗೋಡೆ, ತೊಲೆ ಕಂಬಗಳು ರೂಢಿಗೆ ಬಂದುವು. ರೋಮನ್ನರ ಕಾಲದಲ್ಲಿ ಕಮಾನು, ಗುಮ್ಮಟ, ಕಮಾನಿನ ಚಾವಣಿ (ವಾಲ್ಟ್‌) ಬಹುವಾಗಿ ಉಪಯೋಗವಾಯಿತು. ಅನಂತರ ಚೂಪು ಕಮಾನು ಮುಂತಾದ ಹೊಸ ಆವಿಷ್ಕರಣಗಳಾದುವು. ೧೯ನೆಯ ಶತಮಾನದ ವರೆಗೂ ಈ ರಚನಾ ತಂತ್ರಗಳು ರೂಢಿಯಲ್ಲಿದ್ದುವು. ಈಚೆಗೆ ಕಬ್ಬಿಣ ಮತ್ತು ಕಾಂಕ್ರೀಟ್ ಬಳಕೆಗೆ ಬಂದಮೇಲೆ ಚಾಚುತೊಲೆ (ಕ್ಯಾಂಟಿಲಿವರ್) ತೂಗುಕಮಾನು (ಸಸ್ಪೆನ್ಷನ್ ಆರ್ಚ್) ಮುಂತಾದ ಹೊಸ ರಚನಾವಿಧಾನಗಳು ಹರಡುತ್ತಿವೆ.

ಭಾರತದಲ್ಲಿಯೂ ಇದೇ ರೀತಿಯ ತಾಂತ್ರಿಕ ಬೆಳವಣಿಗೆ ಕಾಣಬರುತ್ತೆ. ಶಿಲಾಯುಗದಲ್ಲಿ ಜೋಪಡಿ, ತಡಿಕೆಗೋಡೆ, ಹಾರು-ಇವು ಮಾತ್ರ ಬಳಕೆಯಲ್ಲಿದ್ದುವು. ಹರಪ್ಪ ನಾಗರಿಕತೆಯ ಕಾಲದಲ್ಲಿ ಹಸಿ ಮತ್ತು ಸುಟ್ಟ ಇಟ್ಟಿಗೆಯ ಕಟ್ಟಡಗಳು ವಿಶೇಷವಾದುವು. ಆ ಕಾಲದ ಬಂಧನಸಾಮಗ್ರಿ (ಸಿಮೆಂಟಿಂಗ್ ಮೆಟೀರಿಯಲ್) ಮಣ್ಣು ಮಾತ್ರ. ಅಲ್ಲದೆ ಆ ಕಾಲದಲ್ಲಿ ತೊಲೆಗಳಿದ್ದರೂ ಕಂಬ ಅಪರೂಪವಾಗಿತ್ತು. ಅನಂತರ ಇಟ್ಟಿಗೆಯ ಉಪಯೋಗ ಕಡಿಮೆಯಾಗಿ ಪ್ರ.ಶ.ಪೂ.  (೬-೫) ಶತಮಾನದಲ್ಲಿ ಪುನಃ ಬಳಕೆಗೆ ಬಂತು. ದಕ್ಷಿಣದ ಭಾರತದಲ್ಲಿ ಇಟ್ಟಿಗೆಯ ಮೊದಲ ಉಪಯೋಗದ ಬಗ್ಗೆ ಮಾಹಿತಿಯಿರುವುದು ಪ್ರ.ಶ. ಪೂರ್ವದ ಅಂತ್ಯಕಾಲದಲ್ಲಿ ಮಾತ್ರ. ರಚನಾಸಾಮಗ್ರಿಯಾಗಿ ಕಲ್ಲನ್ನು ವಿಶೇಷವಾಗಿ ಬಳಸಿದ್ದು ಪ್ರ.ಶ.ಪೂ.  (೪-೩)ನೆಯ ಶತಮಾನದಿಂದ. ಈ ಹಿಂದೆ ಮರದ ಕಟ್ಟಡಗಳು ಹೆಚ್ಚಾಗಿದ್ದು ಅನಂತರ ಸಾಮಗ್ರಿಯ ಬದಲಾವಣೆಯಾದರೂ ಮೊದಲು ಕಲ್ಲು ಕಟ್ಟಡಗಳು, ಹಳೆಯ ಮರದ ಕಟ್ಟಡಗಳ ಮಾದರಿಯಲ್ಲೇ ಇರುತ್ತಿದ್ದುವು. ಭಾರತದ ಕಲ್ಲು ಕಟ್ಟಡಗಳ ರಚನಾತಂತ್ರ ಗೋಡೆ, ಅಡ್ಡತೊಲೆ ಮತ್ತು ಕಂಬಗಳಿಂದ ಆವರಣಗಳನ್ನು ನಿರ್ಮಿಸುವುದಕ್ಕಷ್ಟೇ ಸೀಮಿತವಾಗಿತ್ತು. ಹಳೆಯ ಕಲ್ಲು ಕಟ್ಟಡಗಳಲ್ಲಿ ಬಂಧಕಸಾಮಗ್ರಿಯೇನೂ ಇರುವುದಿಲ್ಲ. ಕ್ರಿ.ಶ. (೬-೭)ನೆಯ ಶತಮಾನದ ಕಾಶ್ಮೀರದ ಕಟ್ಟಡಗಳಲ್ಲಿ ಸಿರಿಯಾ-ರೋಮನ್ ವಾಸ್ತುತಂತ್ರದಿಂದ ಎರವಲಾಗಿ ಪಡೆದ ಬೆಣೆ ಗಾರೆ ಮುಂತಾದ ಬಂಧಕಗಳು ಪ್ರಯೋಗಿತವಾಗಿದ್ದರೂ ಈ ತಂತ್ರ ಇತರೆಡೆಗಳಿಗೆ ಅಷ್ಟಾಗಿ ಹರಡಲಿಲ್ಲ. ಮುಸ್ಲಿಂ ವಾಸ್ತುಕಲೆಯ ಪ್ರವೇಶದ ಅನಂತರ ಗುಮ್ಮಟ, ಕಮಾನು ಮುಂತಾದ ರಚನಾವಿಧಾನಗಳೂ ಬಂಧಕ ಸಾಮಗ್ರಿಯಾಗಿ ಗಾರೆಯೂ ವಿಶೇಷವಾಗಿ ಪ್ರಚಲಿತವಾಯಿತು. ಈಚೆಗೆ ಕಬ್ಬಿಣ-ಕಾಂಕ್ರೀಟ್ಳ ಜೊತೆಗೆ ಹೊಸ ರಚನಾತಂತ್ರಗಳೂ ಹರಡಿವೆ. ಆದರೆ ಇವೆಲ್ಲ ವಿದೇಶಗಳಲ್ಲಿ ಬೆಳೆಸಿದ ತಂತ್ರಗಳ ಅನುಕರಣ ಮಾತ್ರವಾಗಿವೆ.

ಶಿಲ್ಪಕಲೆ
ವಾಸ್ತುರಚನೆಯಂತೆ ಶಿಲ್ಪ ಸಹ ತ್ರೀ-ಪರಿಮಾಣವನ್ನು (ತ್ರೀ ಡೈಮೆನ್ಷನ್) ಆಕರ್ಷಕರೀತಿಯಲ್ಲಿ ರೂಪಿಸುವುದೇ ಆಗಿದೆ. ಆದರೆ ವಾಸ್ತುರಚನೆಯಲ್ಲಿ ಒಂದು ಉಪಯೋಗಿ ಆವರಣದ ಸೃಷ್ಟಿಯ ಉದ್ದಿಶ್ಯವಿದ್ದರೆ, ಶಿಲ್ಪದಲ್ಲಿ ಮಾನವ, ಪ್ರಾಣಿ, ಮರ, ಲತೆ ಮುಂತಾದ ವಸ್ತುಗಳ ರಚನೆಯ ಉದ್ದೇಶವಿದೆ. ಶಿಲ್ಪದಲ್ಲಿ ಪೂರ್ಣಶಿಲ್ಪ ಮತ್ತು ಉಬ್ಬುಶಿಲ್ಪ ಎಂದು ಎರಡು ವಿಧ. ಪೂರ್ಣಶಿಲ್ಪ ಎಲ್ಲ ಪರಿಮಾಣಗಳನ್ನೂ ರೂಪಿಸಿರುವ ಕೃತಿ. ಒಂದು ರೂಪು ಹಿನ್ನಲೆಯಿಂದ ಸ್ವಲ್ಪಮಾತ್ರ ಮುಂದೆ ಎದ್ದಿರುವಂತೆ ಮಾಡುವುದು ಉಬ್ಬುಶಿಲ್ಪದ ತಂತ್ರ. ಅಂದರೆ ಇದರಲ್ಲಿ ಹಿಂಭಾಗದ ಕೆತ್ತನೆಯಿರುವುದಿಲ್ಲ. ಶಿಲ್ಪತಂತ್ರ ಸಾಮಗ್ರಿಯನ್ನು ಅವಲಂಬಿಸಿರುತ್ತದೆ. ರೂಪಿಸಲು ಸಾಧ್ಯವಾಗಿ, ಆ ರೂಪವನ್ನು ಬಹುಕಾಲ ಉಳಿಸಿಕೊಳ್ಳಬಲ್ಲ ಗುಣವುಳ್ಳ ಯಾವ ವಸ್ತುವಾದರೂ ಶಿಲ್ಪಕ್ಕೆ ಸಾಮಗ್ರಿಯಾಗಬಹುದು. ಮರ, ಮಣ್ಣು, ಕಲ್ಲು ಮತ್ತು ಲೋಹ ಬಹು ಹಿಂದಿನಿಂದಲೂ ಬಳಕೆಯಲ್ಲಿರುವ ವಸ್ತುಗಳು. ಶಿಲ್ಪದಲ್ಲಿ ರೂಪಣೆ (ಮಾಡೆಲ್ಲಿಂಗ್) ಮತ್ತು ಒಪ್ಪಗೆಲಸ (ಫಿನಿಷಿಂಗ್) ಇವೆರಡೂ ಮುಖ್ಯ ಘಟ್ಟಗಳು. ಮರ ಮತ್ತು ಕಲ್ಲಿನ ರೂಪಣಾತಂತ್ರ ಬಹುಮಟ್ಟಿಗೆ ಒಂದೇ ರೀತಿಯದು. ಉಳಿ ಅಥವಾ ಬಾಚಿಯಿಂದ ಮೊದಲು ಉದ್ದಿಷ್ಟ ರೂಪನ್ನು ಒರಟಾಗಿ ನಿರ್ಮಿಸಿಕೊಂಡು, ಅನಂತರ ಉಳಿಯಿಂದಲೋ ಚಿಕ್ಕ ಕೊರೆಯುವ ಸಾಧನದಿಂದಲೋ ವಿವರಗಳನ್ನು ಬಿಡಿಸುವುದು ರೂಢಿ. ಅನಂತರ ನಯ ಮಾಡುವುದು. ಕೆಲವು ಸಲ ಬಣ್ಣ ಹಾಕುವುದೂ ಉಂಟು. ಈ ತಂತ್ರಗಳು ಶಿಲಾ ಯುಗದಾರಭ್ಯ ಇಂದಿನ ವರೆಗೂ ಹೆಚ್ಚು ಬದಲಾವಣೆಯಿಲ್ಲದೆ ನಡೆದುಬಂದಿವೆ. ಸುಲಭವಾಗಿ ರೂಪಾಂತರಿಸಬಲ್ಲ ಹನಿಜೇಡಿಯಲ್ಲಿ ಪ್ರತಿಮೆಯನ್ನು ಕೈಯಿಂದ ನಿರ್ಮಿಸಿ, ಅನಂತರ ಸುಟ್ಟು ಗಟ್ಟಿ ಮಾಡುವುದು ಶಿಲಾಯುಗದಿಂದಲೂ ಬಳಸುತ್ತಿರುವ ಮಣ್ಣುಶಿಲ್ಪದ ತಂತ್ರ. ರೂಪಣೆಗೆ ಕೆಲವೊಮ್ಮೆ ಕಲ್ಲಿನ, ಮರದ ಅಥವಾ ಸುಟ್ಟ ಮಣ್ಣಿನ ಅಚ್ಚನ್ನು ಬಳಸಿ ಏಕರೀತಿಯ ಅನೇಕ ಬೊಂಬೆಗಳನ್ನು ಮಾಡಬಹುದು. ಈ ವಿಧಾನ ಸುಮಾರು (೨,೦೦೦) ವರ್ಷಗಳಿದಲೂ ಬಳಕೆಯಲ್ಲಿದೆ. ಇದೇ ರೀತಿಯಲ್ಲಿ ಗಾರೆಯಲ್ಲೂ ಶಿಲ್ಪಗಳನ್ನು ಮಾಡಬಹುದು. ಆದರೆ ಇಲ್ಲಿ ಸುಟ್ಟು ಗಟ್ಟಿಮಾಡುವ ಆವಶ್ಯಕತೆಯಿಲ್ಲ. ರೂಪಣೆಯ ಅನಂತರ ಮೆರಗು ಅಥವಾ ವರ್ಣಲೇಪನದಿಂದ ಪರಿಷ್ಕರಿಸಬಹುದು. ಪ್ರ.ಶ.ಪೂ.  ೩,೦೦೦ದ ಸುಮಾರಿನಲ್ಲಿ ಲೋಹದ ಬಳಕೆ ಪ್ರಾರಂಭವಾದಂದಿನಿಂದ, ಶಿಲ್ಪ ರೂಪಣೆಯಲ್ಲೂ ಆ ವಸ್ತು ಉಪಯೋಗವಾಯಿತು. ಇದರಲ್ಲಿ ಒಪ್ಪಗೆಲಸ ಚಿಕ್ಕ ಉಳಿ ಅಥವಾ ಹೆರೆಯುವ ಸಾಧನದಿಂದಾಗುತ್ತದೆ. ರೂಪಣೆ ಎರಕವಿಧಾನದಿಂದ. ಇದರಲ್ಲಿ ಎರಡು ವಿಧ, ಮೊದಲು ಮೇಣದಲ್ಲಿ ಸುಟ್ಟಾಗ ಮೇಲಿನ ಮಣ್ಣಿನ ಕವಚ ಗಟ್ಟಿಯಾಗಿ ಒಳಗಿನ ಮೇಣ ಕರಗಿ ಅದಕ್ಕಾಗಿ ಕವಚದಲ್ಲಿ ಮಾಡಿರುವ ಸಣ್ಣ ರಂಧ್ರಗಳಿಂದ ಹೊರಗೆ ಹರಿದು ಒಳಗೆ ಡೊಳ್ಳಾಗುತ್ತದೆ. ಈ ಡೊಳ್ಳಿಗೆ ಕರಗಿಸಿದ ಲೋಹವನ್ನು ಸುರಿದು ಅದು ಗಟ್ಟಿಯಾದ ಮೇಲೆ, ಮಣ್ಣಿನ ಕವಚವನ್ನು ಒಡೆದಾಗ ಲೋಹದ ಬಿಂಬ ಮೊದಲ ಮೇಣದ ಆಕೃತಿಯಲ್ಲೇ ಇರುತ್ತದೆ. ಈಚೆಗೆ ಮೇಲುಕವಚಕ್ಕೆ ಮಣ್ಣಿನ ಬದಲು ಸಿಮೆಂಟನ್ನು ಅಚ್ಚುಗಳಂತೆ ಮಾಡಿ ಉಪಯೋಗಿಸುವುದೂ ಉಂಟು. ಈ ವಿಧಾನದಿಂದ ಪೂರ್ಣಲೋಹದ ಗಟ್ಟಿಮೂರ್ತಿಗಳು ತಯಾರಾಗುತ್ತವೆ. ಈ ವಿಧಾನವನ್ನೇ ಸ್ವಲ್ಪ ನವೀಕರಿಸಿ, ಮೊದಲು ಮಣ್ಣಿನಲ್ಲಿ ಒಂದು ಒರಟು ರೂಪವನ್ನು ನಿರ್ಮಿಸಿ ಅದರ ಮೇಲೆ ಮೇಣವನ್ನು ಮೆತ್ತಿ ಮುಖ್ಯ ಉದ್ದಿಷ್ಟ ವಿವರಗಳನ್ನೆಲ್ಲ ಬಿಡಿಸಲಾಗುತ್ತದೆ. ಅದರ ಮೇಲೆ ಪುನಃ ಮಣ್ಣು ಮೆತ್ತಿ ಆ ಮಾದರಿಯನ್ನು ಸುಡುವುದರಿಂದ ಮೇಲಿನ ಮತ್ತು ಒಳಗಿನ ಮಣ್ಣು ಗಟ್ಟಿಯಾಗುವುದಲ್ಲದೆ ಎರಡು ಮಣ್ಣಿನ ಸ್ತರಗಳ ಮಧ್ಯದ ಮೇಣ ಕರಗಿ ಹೊರಬೀಳುತ್ತದೆ. ಆ ಡೊಳ್ಳಿಗೆ ಕರಗಿದ ಲೋಹವನ್ನು ಹುಯ್ದು, ಆರಿದ ಮೇಲೆ ಮೇಲಿನ ಮೃತ್ಕವಚವನ್ನು ಒಡೆದಾಗ ಲೋಹದಲ್ಲಿ ಉದ್ದಿಷ್ಟ ರೂಪು ಸಿದ್ದವಾಗಿರುತ್ತದೆ. ಅನಂತರ ಮೆರಗು ಮತ್ತು ಒಪ್ಪಗೆಲಸ.ಇಲ್ಲಿಯೂ ಮಣ್ಣಿನ ಬದಲು ಇತರ ಪದಾರ್ಥಗಳನ್ನು ಬಳಸುವುದುಂಟು. ಚಿನ್ನ, ಬೆಳ್ಳಿ, ತಾಮ್ರ ಮುಂತಾದ ಲೋಹಗಳ ತೆಳುಪಟ್ಟಿಗಳ ಹಿಂಭಾಗದಲ್ಲಿ ಗಟ್ಟಿಯಾದ ಅಚ್ಚನ್ನು ಒತ್ತಿ ಅಥವಾ ಚಾಣದಿಂದ ಬಡಿದು, ಮುಂಭಾಗದಲ್ಲಿ ನಿರ್ದಿಷ್ಟರೂಪು ಎದ್ದುಕಾಣುವಂತೆ ಮಾಡುವ ಒಂದು ಶಿಲ್ಪತಂತ್ರವೂ ರೂಢಿಯಲ್ಲಿದೆ. ವಿಧಾನ ಯಾವುದೇ ಆದರೂ ವಿಶಾಲ ತೆರಪನ್ನು (ವೇಕೆಂಟ್ ಸ್ಪೇಸ್) ಒಂದು ಘನರೂಪಿನಿಂದ (ಮಾಸ್) ಛೇದಿಸುವುದೇ ಶಿಲ್ಪದ ಮುಖ್ಯತಂತ್ರ.. ಲೋಹದ ಅಥವಾ ಪ್ಲಾಸ್ಟಿಕ್ಕಿನ ಪಟ್ಟಿಕೆಗಳನ್ನು ನಿಶ್ಚಿತರೂಪಕ್ಕೆ ಬಗ್ಗಿಸಿ, ಬೆಸೆದು ಇದೇ ಉದ್ದೇಶವನ್ನು ಸಾಧಿಸುವ ಹೊಸತಂತ್ರ ಈಚೆಗೆ ಪ್ರಚಾರಕ್ಕೆ ಬರುತ್ತಿದೆ. ಶಿಲ್ಪದ ಪರಿಣಾಮವನ್ನು ಹೆಚ್ಚಿಸಲು, ರೂಪಿಸುವ ವಸ್ತುವಿಗೆ ಒಪ್ಪುವ ರಚನೆ ಮತ್ತು ಬಣ್ಣವಿರುವ ಪದಾರ್ಥದ ಆಯ್ಕೆ, ಬೆಳಕು-ನೆರಳಿನ ಸಂಯೋಜನೆ, ಮೆರಗು, ಬಣ್ಣ ಅಥವಾ ಇತರ ಪದಾರ್ಥಗಳನ್ನು ಶಿಲ್ಪದ ಹೊರಮೈನಲ್ಲಿ ಅವಶ್ಯಭಾಗಗಳಲ್ಲಿ ಹುದುಗಿಸುವುದು ಮುಂತಾದ ವಿಧಾನಗಳು ಬಳಕೆಯಲ್ಲಿವೆ.

ಶಿಲ್ಪತಂತ್ರ ವಿಶ್ವದಲ್ಲೆಲ್ಲ ಸುಮಾರು ಏಕರೀತಿಯದು. ಆದರೆ ಶಿಲ್ಪ ನಿರೂಪಣೆಗೆ ಮೊದಲು ಒಂದು ಮಾದರಿಯನ್ನು ಜೇಡಿ, ಮೇಣ, ಅಥವಾ ಇತರ ಸುಲಭವಾಗಿ ರೂಪಾಂತರಿಸಬಲ್ಲ ವಸ್ತುವಿನಲ್ಲಿ ನಿರ್ಮಿಸಿಕೊಂಡು ಅನಂತರ ಅದನ್ನು ಬೇರೆ ಗಟ್ಟಿ ಪದಾರ್ಥಗಳಲ್ಲಿ ಅನುಕರಿಸುವುದು ಪಾಶ್ಚಾತ್ಯದೇಶಗಳಲ್ಲಿರುವ ಪದ್ದತಿ. ಭಾರತ ಮತ್ತು ಇತರ ಪೌರಸ್ತ್ಯದೇಶಗಳಲ್ಲಿ, ಮನಸ್ಸಿನಲ್ಲೇ ಉದ್ದಿಷ್ಟ ಪ್ರತಿಮೆಯ ರೂಪನ್ನು ಚಿತ್ರಿಸಿಕೊಂಡು ನೇರವಾಗಿ ಕೆತ್ತನೆಯನ್ನು ಮಾಡುವ ರೂಢಿಯಿದೆ. ವಿವಿಧ ಭಾಗಗಳ ಪರಸ್ಪರ ಪ್ರಮಾಣವನ್ನು ನಿಖರವಾಗಿರಿಸಲು ಮಾತ್ರ, ರೂಪಿಸುವ ವಸ್ತುವಿನ ಮೇಲೆ ಕೆಲವು ರೇಖೆಗಳನ್ನು ಚಿತ್ರಿಸಿಕೊಳ್ಳುವುದುಂಟು. ಈ ವಿಧಾನಗಳಿಗೆ ಅಪವಾದಗಳೂ ಅಪೂರ್ವವಾಗಿ ಕಾಣಬರುತ್ತವೆ.

ಚಿತ್ರಕಲೆ
ಚಿತ್ರ ಪ್ರಕೃತಿಯಲ್ಲಿ ಅಸಾಮಾನ್ಯವಾದ, ಆದರೆ ಅದನ್ನೇ ಪೂರ್ಣವಾಗಿ ಅನುಕರಿಸಿದೆಯೆಂಬ ಭ್ರಮೆ ಮೂಡಿಸುವ ಒಂದು ಚತುರ ಕೃತಿ. ಪ್ರಕೃತಿಯಲ್ಲಿ ಪದಾರ್ಥಗಳಿಗೆ ತ್ರಿಪರಿಮಾಣಗಳಿವೆ. ಆದರೆ ಉದ್ದ, ಅಗಲ ಎರಡೇ ಪರಿಮಾಣಗಳಲ್ಲಿ ತ್ರಿಪರಿಮಾಣವನ್ನೂ ಸೂಚಿಸುವುದು ಚಿತ್ರಕಲೆಯ ಮುಖ್ಯ ಸೂತ್ರ. ಅಂದರೆ ಚಿತ್ರದಲ್ಲಿ ಘನರೂಪವಿಲ್ಲ, ಆದರೆ ಘನರೂಪದ ಭಾವನೆ ಇದೆ. ಈ ಭಾವನೆಯನ್ನು ನಿರೂಪಿಸಲು ಮೂರು ತಂತ್ರಗಳು ಹಿಂದಿನಿಂದಲೂ ಬಳಕೆಯಲ್ಲಿವೆ. ಅವು ಯಥಾದೃಷ್ಟಿರೂಪಣ ನೆರಳು-ಬೆಳಕಿನ ಸಂಯೋಜನೆ ಮತ್ತು ವರ್ಣವಿನ್ಯಾಸ. ವಸ್ತುಗಳು ದೂರದಲ್ಲಿದ್ದಾಗ ಚಿಕ್ಕದಾಗಿ ಕಾಣುವುದಲ್ಲದೆ ಅಸ್ಪಷ್ಟವೂ ಆಗುತ್ತವಷ್ಟೆ. ಇದನ್ನು ಒಂದೇ ಸಮತಲದಲ್ಲಿ ಕಾಣುವಂತೆ ರೂಪಿಸಿದರೆ, ದೂರ-ಹತ್ತಿರದ ಭ್ರಮೆಯನ್ನೂ ಮೂಡಿಸಬಹುದು. ಇದೇ ಯಥಾ ದೃಷ್ಟಿರೂಪಣ (ಪಸೆರ್ಪ್‌ಕ್ಟಿವ್). ಹಾಗೆಯೇ ತ್ರಿಪರಿಮಾಣವಿರುವ ಒಂದು ವಸ್ತುವನ್ನು ನೋಡಿದಾಗ, ಕೆಲವೆಡೆ ಹೆಚ್ಚು ಬೆಳಕಿದ್ದರೆ, ಕೆಲವು ಕಡೆ ಕಡಿಮೆ ಬೆಳಕೋ, ನೆರಳೋ ಇರುತ್ತದೆ. ಈ ಪರಿಣಾಮವನ್ನು ಸಮತಲದಲ್ಲಿ ರೂಪಿಸಿದರೆ, ಚಿತ್ರ ದ್ವಿಪರಿಮಾಣಾತ್ಮಕವಾದರೂ ತ್ರಿಪರಿಮಾಣದ ದೃಶ್ಯ ಗುಣವನ್ನು ತೋರುತ್ತದೆ. ಇದು ನೆರಳು-ಬೆಳಕಿನ ಸಂಯೋಜನಾತಂತ್ರ,. ಮೂರನೆಯದು ಬಣ್ಣಗಳ ಗುಣಗಳನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಕೆಂಪು, ಹಳದಿ ಮುಂತಾದ ಬಣ್ಣಗಳು ಹತ್ತಿರದಿಂದ ಕಣ್ಣಿಗೆ ಬಡಿದಂತೆ ಎದ್ದುಕಾಣುತ್ತವೆ. ಆದರೆ ನೀಲಿ, ಹಸಿರು ಮುಂತಾದವು ಕಣ್ಣಿಗೆ ಹಿತವಾಗಿ ಬಹಳ ದೂರವಿದ್ದಂತೆ ಭಾಸವಾಗುತ್ತವೆ. ಈ ಗುಣಗಳನ್ನು ಚಿತ್ರೀಕರಣದಲ್ಲಿ ಅಳವಡಿಸಿಕೊಂಡು ತ್ರಿ-ಪರಿಮಾಣದ ಪರಿಣಾಮವನ್ನು ಸಾಧಿಸುವುದು ವರ್ಣ ಸಂಯೋಜನಾತಂತ್ರ.

ಚಿತ್ರ ಕಲೆಯಲ್ಲಿ ಎರಡು ವಿಧ-ವರ್ಣಚಿತ್ರ ಮತ್ತು ರೇಖಾಚಿತ್ರ ಎಂದು. ವರ್ಣಚಿತ್ರದ ತಂತ್ರ ನಿರೂಪಣೆಗೆ ಉಪಯೋಗಿಸುವ ಆಧಾರತಲ (ಗ್ರೌಂಡ್) ಬಣ್ಣ ಮತ್ತು ಉಪಕರಣಗಳಿಗೆ ಅನುಸಾರವಾಗಿರುತ್ತದೆ. ಆಧಾರತಲವಾಗಿ ಗೋಡೆ, ಹಲಗೆ, ಕಾಗದ ಅಥವಾ ಬಟ್ಟೆ ಹಿಂದಿನಿಂದಲೂ ಬಳಕೆಯಲ್ಲಿವೆ. ನಶಿಸದೆ ಉಳಿಯಬಹುದಾದ ಯಾವ ಘನಪದಾರ್ಥವನ್ನಾದರೂ ಉಪಯೋಗಿಸುವ ಹವ್ಯಾಸ ಈಚೆಗೆ ಬೆಳೆಯುತ್ತಿದೆ. ಬಣ್ಣಗಳಲ್ಲಿ ಹಿಂದೆ ಪ್ರಾಕೃತಿಕ ಖನಿಜ ಅಥವಾ ಸಸ್ಯಮೂಲ ಬಣ್ಣಗಳಷ್ಟೇ ಉಪಯೋಗದಲ್ಲಿದ್ದುವು. ಈಗ ಅನೇಕರೀತಿಯ ರಾಸಾಯನಿಕ ಬಣ್ಣಗಳು ಹೆಚ್ಚು ಬಳಕೆಯಲ್ಲಿವೆ. ಬಣ್ಣವನ್ನು ಬಂಧಿಸಲು ಒಂದು ಅಂಟೂ ಬೇಕು. ಕೋಳಿ ಮೊಟ್ಟೆಯ ರಸ ಇಂಥ ಬಂಧಕವಸ್ತುವನ್ನು ಪಾಶ್ವಾತ್ಯದೇಶಗಳಲ್ಲಿ ಉಪಯೋಗದಲ್ಲಿತ್ತು. ಭಾರತದಲ್ಲಿ ಸಸ್ಯಮೂಲದ ಗೋಂದನ್ನು ಇದಕ್ಕಾಗಿ ಉಪಯೋಗಿಸುತ್ತಿದ್ದಿರಬಹುದು. ಈಗ ಅನೇಕ ಕೃತಕ ರಾಸಾಯನಿಕ ಬಂಧಕ ವಸ್ತುಗಳು ಸಿಗುತ್ತವೆ. ಬಂಧಕ ವಸ್ತುವನ್ನು ಬಣ್ಣದೊಡನೆಯೇ ಬೆರೆಸಿರುವುದೂ ಉಂಟು. ಚಿತ್ರಣಕ್ಕೆ ಬಣ್ಣವನ್ನು ರಾಡಿಯಾಗಿ ಲೇಪಿಸಬಹುದು ಅಥವ ತುಂತುರುತುಂತುರಾಗಿ ಸಿಂಪಡಿಸಬಹುದು. ಮೊದಲನೆಯ ರೀತಿಗೆ ಕುಂಚ ಮುಖ್ಯ ಉಪಕರಣ. ಈ ಕುಂಚಗಳು ಉದ್ದಿಷ್ಟ ಸಂದರ್ಭಕ್ಕೆ ಉಪಯುಕ್ತವಾಗಿರುವಂತೆ ಉದ್ದ, ಗಾತ್ರದಲ್ಲೂ ಕೇಶದ ಮೃದುತ್ವ ಬಿಗಿತಗಳಲ್ಲಿಯೂ ವಿವಿಧರೀತಿಯವಿರುತ್ತವೆ. ತುಂತುರು ಲೇಪನಕ್ಕೆ ಹಿಂದೆ ಸಣ್ಣ ಕೊಳವೆಗಳಲ್ಲಿ ಬಣ್ಣವನ್ನು ತುಂಬಿ ಬಾಯಿಂದ ಊದಲಾಗುತ್ತಿತ್ತು. ಈಗ ಅನೇಕ ಯಾಂತ್ರಿಕ ಸಾಧನಗಳಿವೆ.
ತಂತ್ರದ ವಿಧಾನದ ಮೇಲೆ ವರ್ಗೀಕರಿಸಬಹುದಾದ ಅನೇಕ ಚಿತ್ರಣ ರೀತಿಗಳಿವೆ. ಇವು ವಿವಿಧ ದೇಶ, ಕಾಲಗಳಲ್ಲಿ ಬಂದವು. ಈಗ ಉಳಿದಿರುವ ಕೃತಿಗಳಿಂದ ಹೇಳುವುದಾದರೆ, ಶಿಲಾಯುಗದಲ್ಲಿ ವರ್ಣಚಿತ್ರಣಕ್ಕೆ ಪರ್ವತಗುಹೆಗಳ ಗೋಡೆ ಅಥವಾ ಕಲ್ಲುಬಂಡೆಗಳು ಆಧಾರತಲವಾಗಿದ್ದವು. ಅವುಗಳ ಮೇಲೆ ನೇರವಾಗಿ ಬಣ್ಣದ ರಾಡಿಯನ್ನು ತುದಿ ಜಜ್ಜಿದ ಕಡ್ಡಿ ಅಥವಾ ಕೇಶಕುಂಚದಿಂದ ಲೇಪಿಸಲಾಗುತ್ತಿತ್ತು. ಬಣ್ಣವನ್ನು ಬಾಯಲ್ಲಿ ತುಂಬಿಯೋ ಕೊಳವೆಯ ಮೂಲಕವೋ ಸಿಂಪಡಿಸುವ ವಿಧಾನವೂ ಇತ್ತು. ಈಜಿಪ್ಟ್‌ ಮುಂತಾದ ಪ್ರಾಚೀನ ನಾಗರೀಕತೆಗಳಲ್ಲೂ ಈ ವಿಧಾನಗಳು ಹೆಚ್ಚು ಬಳಕೆಯಲ್ಲಿ ಪರಿಷ್ಕೃತವಾಗಿರುತ್ತಿತ್ತು. ಯುರೋಪ್ ಮುಂತಾದೆಡೆಗಳಲ್ಲಿ ಉಪಯೋಗಿಸುತ್ತಿರುವ ಟೆಂಪೆರಾ ಎಂಬ ವಿಧಾನ ವಿಶಿಷ್ಟ ರೀತಿಯದು. ಪರಿಷ್ಕರಿಸಿದ ಆಧಾರತಲದಮೇಲೆ, ನೀರಿನಲ್ಲಿ ಬೆರೆಯುವ ವಸ್ತುವಿನಲ್ಲಿ ಅರೆದ ಬಣ್ಣವನ್ನು ವರಸೆಯಾಗಿ ಪದರದ ಮೇಲೆ ಪದರದಂತೆ ಲೇಪಿಸುವ ಪದ್ದತಿಯೇ ಟೆಂಪೆರಾ. ಇದರಲ್ಲಿ ಬಣ್ಣದ ತೆಳುಪದರಗಳು ಅರೆಪಾರದರ್ಶಕವಾಗಿರುವುದರಿಂದ ತಳ ಮತ್ತು ಮೇಲಿನ ಪದರದ ಬಣ್ಣಗಳು ಹಿತವಾಗಿ ಕೂಡಿ ನೋಡುವವರಿಗೆ ಉದ್ದಿಷ್ಟಪರಿಣಾಮವನ್ನು ಸುಲಭವಾಗಿ ಮೂಡಿಸಬಹುದು. ಟೆಂಪೆರಾ ಯುರೋಪಿಯನ್ ಭಾಷೆಗಳಲ್ಲಿರುವ ಟೆಂಪರ್ (ಗಟ್ಟಿಮಾಡು) ಎಂಬ ಮೂಲದಿಂದ ಹುಟ್ಟಿದುದು. ಈ ವಿಧಾನದಲ್ಲಿ ಕೋಳಿಮೊಟ್ಟೆಯ ರಸದಿಂದ ಬಣ್ಣವನ್ನು ಸ್ಥಿರೀಕರಿಸುತ್ತಿದ್ದುದರಿಂದ ಟೆಂಪೆರಾ ಎಂಬ ಹೆಸರು ರೂಢಿಗೆ ಬಂದಿದೆ. ಪ್ರಾಯಶಃ ಬಿಜಾ಼ಂಟಿನ್ ಯುಗದಲ್ಲಿ ಆರಂಭವಾದ ಈ ಪದ್ದತಿ ಇಂದಿಗೂ ಮುಂದುವರಿಯುತ್ತಿದೆ. ಆದರೆ ಈಚೆಗೆ ವಿಧಾನ ಸ್ವಲ್ಪ ವ್ಯತ್ಯಾಸವಾಗಿದ್ದು ಸ್ಥಿರೀಕರಣಕ್ಕೆ ಕೃತಕರಾಸಾಯನಿಕಗಳು ಬಳಕೆಯಲ್ಲಿವೆ. ಗೋಡೆಯ ಮೇಲೆ ಸುಣ್ಣ ಬಳಿದು ಅದು ಹಸಿಯಾಗಿರುವಾಗಲೇ ನೀರಿನಲ್ಲಿ ಕಲಸಿದ ಬಣ್ಣವನ್ನು ಲೇಪಿಸಿ ಚಿತ್ರಿಸುವುದಕ್ಕೆ ಫ್ರೆಸ್ಕೊ ಎಂದು ಹೆಸರು. ಈ ವಿಧಾನ ಮಿನೋವನ್, ಗ್ರೀಕ್, ರೋಮನ್ ಯುಗಗಳಲ್ಲಿ ಆಯಾ ದೇಶಗಳಲ್ಲಿ ಬಳಕೆಯಲ್ಲಿದ್ದುದಾದರೂ ೧೩-೧೭ನೆಯ ಶತಮಾನಗಳಲ್ಲಿ ಯುರೋಪಿನಲ್ಲಿ ಇದರ ಬಾಹುಳ್ಯ ಕಂಡುಬರುತ್ತದೆ. ಈ ರೀತಿಯ ಚಿತ್ರಣದಲ್ಲಿ ಬಣ್ಣ ಗೋಡೆಯ ಸುಣ್ಣದೊಡನೆ ರಾಸಾಯನಿಕವಾಗಿ ಬೆರೆತು ಗೋಡೆಯ ಭಾಗವಾಗಿಯೇ ಸ್ಥಿರವಾಗುತ್ತದೆ.
	
ಬಣ್ಣದ ಕಣಕದ ಕಡ್ಡಿಗಳಿಂದ ಕಾಗದದ ಮೇಲೆ ನೇರವಾಗಿ ಚಿತ್ರಿಸುವುದು ಪ್ಯಾಸ್ಟೆಲ್ ವಿಧಾನ. ಇದರಲ್ಲಿ ಬಂಧಕವಸ್ತು ಬಣ್ಣದೊಡನೆಯೇ ಬೆರೆತಿರುವುದರಿಂದ ಚಿತ್ರಕಾರನಿಗೆ ಹೆಚ್ಚು ಗೋಜಿರುವುದಿಲ್ಲ. ಇದಕ್ಕೆ ವಿಶೇಷ ರೀತಿಯ ನಯ ಅಥವ ಒರಟು ಕಾಗದಗಳೂ ದೊರಕುತ್ತವೆ. ಇದರಲ್ಲಿ ವರ್ಣಮಿಶ್ರಣ ಮಾಡಬೇಕಾದರೆ ಕಾಗದದ ಮೇಲೆ ಬಣ್ಣಗಳನ್ನು ಮುಂಬೆರಳಿನಿಂದ ಉಜ್ಜುತ್ತಾರೆ. ಬಣ್ಣ ಹೆಚ್ಚು ಸ್ಥಿರವಾಗಿರಲು ಕೆಲವು ಸಲ ಚಿತ್ರದ ಮೇಲೆ ಅಂಟು ಸವರಲಾಗುತ್ತದೆ. ನೀರಿನಲ್ಲಿ ಕರಗಿಸಿದ ಬಣ್ಣಗಳನ್ನು ಕುಂಚದಿಂದ ಬಳಿದು ಚಿತ್ರಿಸುವುದು ಜಲವರ್ಣ ಚಿತ್ರಣವಿಧಾನ (ವಾಟರ್ ಕಲರ್ ಪೆಯಿಂಟಿಂಗ್). ಇದರಲ್ಲಿ ನೀರಿನ ಬೆರಕೆಯ ಪ್ರಮಾಣದಿಂದ ಬಣ್ಣವನ್ನು ತೆಳುವಾಗಿಯೋ ದಪ್ಪವಾಗಿಯೋ ಮಾಡಿಕೊಂಡು ಚಿತ್ರಣದಲ್ಲಿ ವಿವಿಧ ಪರಿಣಾಮಗಳನ್ನು ಮೂಡಿಸಬಹುದು. ಈ ವಿಧಾನದಲ್ಲಿ ಆಧಾರತಲ ವಿಶೇಷತಃ ಕಾಗದ ಅಥವಾ ರೇಷ್ಮೆ. ತೈಲವರ್ಣ ಚಿತ್ರಣವಿಧಾನದಲ್ಲಿ (ಆಯಿಲ್ ಪೆಯಿಂಟಿಂಗ್) ಉಪಯೋಗಿಸುವ ಬಣ್ಣ ತೈಲಮಿಶ್ರಣವಾಗಿರುತ್ತದೆ. ಇದರಲ್ಲಿಯೂ ಮುಖ್ಯ ಸಲಕರಣೆ ಕುಂಚ ಮತ್ತು ಆಧಾರತಲ ಬಹುಮಟ್ಟಿಗೆ ಕಾಗದ. ಈ ತೈಲವರ್ಣಗಳು ನಿಧಾನವಾಗಿ ಒಣಗುವುದರಿಂದ ಚಿತ್ರಕಾರನಿಗೆ ಉದ್ದಿಷ್ಟರೂಪಕ್ಕೆ ಬರುವ ವರೆಗೆ ಆಗಾಗ್ಗೆ ಅವನ್ನು ಸರಿಪಡಿಸುವ ಅವಕಾಶ ಇರುತ್ತದೆ. ಈ ಬಣ್ಣಗಳ ಬಾಳಿಕೆಯೂ ಹೆಚ್ಚು. ಅಲ್ಲದೆ ಈ ಬಣ್ಣಗಳು ಅರೆಪಾರದರ್ಶಕವಾಗಿದ್ದು ಬೆಳಕಿನ ವಕ್ರೀಕರಣ ಗುಣವನ್ನು ಹೊಂದಿರುವುದರಿಂದ ಹೆಚ್ಚು ಹೊಳಪು ಹೊರ ಹೊಮ್ಮುವಂತೆಯೂ ಅಲ್ಲಲ್ಲಿ ಥಳಥಳಿಸುವಂತೆಯೂ ಸಂಯೋಜಿಸುವ ಸೌಲಭ್ಯವಿರುತ್ತದೆ.

ಇತ್ತೀಚಿನ ಚಿತ್ರಕಾರರು ಹಲವು ಹೊಸ ವಿಧಾನಗಳನ್ನು ಅಳವಡಿಸುತ್ತಿದ್ದಾರೆ. ಉಪಯೋಗಿಸುವ ಕುಂಚದ ತರಹದ ಮೇಲೆ ಲೇಪನದ ರಚನೆಯನ್ನು ಮಾರ್ಪಡಿಸುವ ವಿಧಾನ ಹಿಂದಿನಿಂದಲೂ ತಿಳಿದಿತ್ತು. ಇದನ್ನೇ ಮುಂದುವರಿಸಿ ಕುಂಚಕ್ಕೆ ಬದಲು ಚಾಕು, ಬಣ್ಣ ಕಲಸುವ ಚಮಚ, ಕುಂಚದ ಹಿಡಿ ಅಥವಾ ಬೆರಳಿನಿಂದ ವರ್ಣಗುಣವನ್ನು ವ್ಯತ್ಯಾಸಮಾಡುವುದು, ಬಣ್ಣವನ್ನೆಲ್ಲ ಒಟ್ಟಾರೆ ಮೇಲೆ ಸುರಿದು ಬೇಕು ಬೇಕಾದಷ್ಟನ್ನು ವಿವಿಧೆಡೆಗೆ ಎಳೆಯುವುದು, ಗಾಳಿಯ ಒತ್ತಡದಿಂದ ಚಲಿಸುವ ಕುಂಚವನ್ನು ಉಪಯೋಗಿಸುವುದು, ಬಣ್ಣವನ್ನು ಯಂತ್ರಮುಖೇನ ಸಿಂಪಡಿಸುವುದು-ಮುಂತಾದ ರೀತಿಗಳನ್ನು ಈ ಗುಂಪಿಗೆ ಸೇರಿಸಬಹುದು. ಅಲ್ಲದೆ ಚಿತ್ರಣದಲ್ಲಿ ತ್ರಿಪರಿಮಾಣದ ಪರಿಣಾಮವನ್ನು ಮೂಡಿಸಲು ಆಧಾರತಲವನ್ನೇ ಮಾರ್ಪಡಿಸುವುದು, ಅಥವಾ ಬಣ್ಣವನ್ನು ಮುದ್ದೆಮುದ್ದೆಯಾಗಿ ದಪ್ಪಗೆ ಬಳಿಯುವುದು (ಇಂಪ್ಯಾಸ್ಟೊ), ಮೃದುಬಣ್ಣವನ್ನು ಗಾಢಬಣ್ಣದ ಮೇಲೆ ಬಳಿದು ವರ್ಣರಚನೆಯ ಪರಿಣಾಮವನ್ನು ಬದಲಾಯಿಸುವುದು (ಸ್ಕಂಬ್ಲಿಂಗ್) ಮುಂತಾದವೂ ಹುಟ್ಟಿಕೊಂಡಿವೆ. ಇದೇ ಉದ್ದೇಶಕ್ಕೆ ಮರಳು ಅಥವಾ ಕಲ್ಲು ಚೂರುಗಳನ್ನು ಬಣ್ಣಕ್ಕೆ ಬೆರೆಸಿ ಚಿತ್ರಿಸುವುದೂ ಒಂದು ವಿಧಾನ. ಹಾಗೆಯೆ ವಿಜ್ಞಾನದ ಹೊಸ ಆವಿಷ್ಕಾರಗಳನ್ನು ನಾನಾರೀತಿಯಲ್ಲಿ ಹೊಸಚಿತ್ರಣ ತಂತ್ರಗಳಿಗಾಗಿ ಉಪಯೋಗಿಸಲಾಗುತ್ತದೆ.
ಭಾರತದಲ್ಲಿ ಈಚೆಗೆ ಉಪಯೋಗದಲ್ಲಿರುವ ವರ್ಣಚಿತ್ರ ವಿಧಾನಗಳು ಹೊರಗಿನವುಗಳಂತೆಯೇ ಇವೆ. ಆದರೆ ಪ್ರಾಚೀನಭಾರತದಲ್ಲಿದ್ದ ವಿಧಾನ ಸ್ವಲ್ಪ ವ್ಯತ್ಯಸ್ತ. ಅಜಂತ, ಬಾದಾಮಿ, ಸಿತ್ತನ್ನವಾಸಲ್ ಮುಂತಾದೆಡೆಗಳಲ್ಲಿರುವ ಭಿತ್ತಿಚಿತ್ರಗಳಿಗೆ ಹೊಟ್ಟುಮಿಶ್ರಿತ ಮಣ್ಣಿನ ಗಾರೆಯನ್ನು ಗೋಡೆಗೆ ಬಳಿದು, ನಯಮಾಡಿ ಅದರ ಮೇಲೆ ಬಣ್ಣಗಳನ್ನು ಕುಂಚದಿಂದ ಲೇಪಿಸುವ ಪದ್ದತಿ ಇತ್ತು. ಇಲ್ಲಿ ಖನಿಜ ಅಥವಾ ಸಸ್ಯಜನ್ಯ ಬಣ್ಣಗಳನ್ನೂ ಇದ್ದಿಲನ್ನೂ ಮುಖ್ಯವಾಗಿ ಬಳಸಿದೆ. ಬಂಧಕಸಾಮಗ್ರಿ ಸಾಮಾನ್ಯವಾಗಿ ಸಸ್ಯಜನ್ಯ ಗೋಂದಾಗಿದ್ದಿರಬಹುದು. ಮುಫಲ್ ಮುಂತಾದ ಕಲಾರೀತಿಗಳಲ್ಲೂ ವರ್ಣ ಚಿತ್ರಕ್ಕಾಗಿ ಇದೇ ರೀತಿಯ ವಿಧಾನ ಬಳಕೆಯಲ್ಲಿತ್ತು. ಆದರೆ ಇಲ್ಲಿ ಆಧಾರತಲ ಹೆಚ್ಚು ಮಟ್ಟಿಗೆ ಕಾಗದ. ಕೆಲವೆಡೆ ತಾಳೆಯ ಗರಿಗಳ ಮೇಲೂ ಚಿತ್ರಣವಿರುವುದುಂಟು. ಪಶ್ಚಿಮ ಮತ್ತು ದಕ್ಷಿಣ ಭಾರತದ ಕೆಲವೆಡೆ ಬಣ್ಣಗಳ ಜೊತೆಗೆ ಚಿನ್ನ ಅಥವಾ ಬೆಳ್ಳಿಯ ಪುಡಿಯನ್ನು ಮೆತ್ತಿ ಚಿತ್ರಗಳನ್ನು ಆಕರ್ಷಕವಾಗಿ ಮಾಡುವ ಒಂದು ವಿಧಾನವೂ ರೂಢಿಯಲ್ಲಿತ್ತು.

ವರ್ಣಚಿತ್ರಗಳಿಗೆ ಹೋಲಿಸಿದರೆ ರೇಖಾಚಿತ್ರಣದಲ್ಲಿ ತಂತ್ರ ಬಹು ಸುಲಭವಾದುದು. ಆದರೆ ಇದು ಎಲ್ಲ ವಿಧಾನಗಳಿಗೂ ಮೂಲಭೂತವಾದುದು. ರೇಖಾಚಿತ್ರಣದಲ್ಲಿ ಮುಖ್ಯವಾಗಿ ಎರಡು ವಿಧ, ಬರಹ (ಡ್ರಾಯಿಂಗ್) ಮತ್ತು ಕೊರೆತ (ಎನ್ಗ್ರೇವಿಂಗ್). ಯಾವುದೇ ಗಟ್ಟಿ ಪದಾರ್ಥದ ಆಧಾರತಲದ ಮೇಲೆ ಅದಕ್ಕಿಂತ ಹಗುರವಾದ ಪದಾರ್ಥದಿಂದ ಆಧಾರತಲ ಬಾಧಿತವಾಗದಂತೆ ರೂಪಿಸುವುದೇ ಬರಹವಿಧಾನ. ಆಧಾರತಲವಾಗಿ ಕಲ್ಲು, ಮಣ್ಣು, ಮರದ ಫಲಕಗಳನ್ನಾಗಲೀ, ಕಾಗದ, ಬಟ್ಟೆಗಳನ್ನಾಗಲೀ ಉಪಯೋಗಿಸಬಹುದು. ಬರಹಕ್ಕೆ ಸೀಸದ ಕಡ್ಡಿ, ಲೇಖನಿ, ಸೀಮೆಸುಣ್ಣ, ಇದ್ದಲು ಅಥವಾ ಬಣ್ಣವನ್ನು ಉಪಯೋಗಿಸಬಹುದು. ಕೊರೆತ ವಿಧಾನದಲ್ಲಿ ಆಧಾರತಲಕ್ಕಿಂತ ಗಟ್ಟಿಯಾದ ಉಪಕರಣದಿಂದ ಆಧಾರತಲವನ್ನೇ ಕೊರೆದು ಗೆರೆಗಳನ್ನು ಮೂಡಿಸಲಾಗುತ್ತದೆ. ಪ್ರಾಚೀನ ಶಿಲಾಯುಗದಲ್ಲಿ ಕಲ್ಲುಗೋಡೆಗಳ ಸಮತಲದ ಮೇಲೆ ಗಟ್ಟಿಕಲ್ಲಿನ ಕೊರೆಯುವ ಉಳಿಗಳಿಂದ (ಬ್ಯೂರಿನ್) ರೂಪಿಸಿದ ಚಿತ್ರಗಳಿವೆ. ಗಟ್ಟಿ ಮೊಳೆಯಿಂದ ಅಥವಾ ಸಣ್ಣ ಚಾಣದಿಂದ ಲೋಹಗಳ ಮೇಲೂ ರೇಖೆಗಳನ್ನು ಮೂಡಿಸಬಹುದು. ವಿಜ್ಞಾನದ ಪ್ರಗತಿಯಿಂದಾಗಿ ರೇಖಾಚಿತ್ರ ವಿಧಾನಗಳಲ್ಲಿ ಬೆಳ್ಳಿ-ಕಡ್ಡಿ ಚಿತ್ರಣ ಮುಂತಾದ ಹೊಸ ತಂತ್ರಗಳು ಬಳಕೆಗೆ ಬರುತ್ತಿವೆ. ಕಂಪ್ಯುಟರ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಕಲಾ ವಿನ್ಯಾಸಗಳಲ್ಲಿ ಅದ್ಭುತ ಬದಲಾವಣೆಗಳಾಗಿವೆ. ತಂತ್ರಾಂಶ ಕಲೆಯು ತನ್ನದೇ ಸ್ಥಾನ ಪಡೆದುಕೊಂಡಿದೆ. ಇದರಿಂದ ಹೆಚ್ಚು ಪರಿಣಾಮಕಾರಿ ಚಿತ್ರಗಳನ್ನು ರೂಪಿಸಲು, ಛಾಪಿಸಲು ಸಾಧ್ಯವಾಗಿದೆ.              (ಎಸ್.ಎನ್.)

ಕಲೆಗಾಗಿ ಕಲೆ
ಕಲಾಕೃತಿ ತನ್ನಷ್ಟಕ್ಕೆ ತಾನೆ ಹುಟ್ಟಿಬರುತ್ತದೆ. ತನಗೋಸ್ಕರವೇ ಇರುತ್ತದೆ. ಅದರ ಉತ್ಪತ್ತಿಗೆ ಮತ್ತಾವ ನಿಮಿತ್ತವೂ ಇಲ್ಲ, ಮತ್ತಾವ ಉದ್ದೇಶವೂ ಅದರಿಂದ ಸಫಲವಾಗುವುದಿಲ್ಲ. ಹೀಗೆಂಬುದು ಕಲೆಗಾಗಿ ಕಲೆಯೆಂಬ ಸೂತ್ರದ ಸಾರ. ಬಹು ಗಲಭೆಯನ್ನೆಬ್ಬಿಸಿರುವ ಈ ವಾದ ೧೯ ನೆಯ ಶತಮಾನದಲ್ಲಿ ಮೊದಲು ಫ್ರಾನ್ಸಿನಲ್ಲಿ ತಲೆದೋರಿ ಕ್ರಮೇಣ ವೃದ್ಧಿ ಹೊಂದಿತು. ಸಂಗೀತದ ವಿಚಾರವಾಗಿ ಈ ತತ್ತ್ವಕ್ಕೆ ಸರ್ವರ ಸಮ್ಮತಿ ಹಿಂದಿನಿಂದಲೂ ಇತ್ತು. ಆದರೆ ೧೮೩೦-೧೮೪೦ರ ದಶಕಗಳಲ್ಲಿ ಫ್ರಾನ್ಸಿನ ಚಿತ್ರಕಾರರ ಒಂದು ಕೂಟದವರು (ದಿ ಬಾರ್ಬಿಸóನ್ ಸ್ಕೂಲ್) ತಮ್ಮ ಕಲೆಗೂ ಅಂಥ ಸ್ವತಂತ್ರ ಸ್ಥಾನವನ್ನು ಗಳಿಸಿ ಕೊಡಲು ಹಾತೊರೆದರು. ದೃಶ್ಯವೊಂದರ ವರ್ಣಚಿತ್ರವನ್ನು ನೋಡುವಾಗ ಅದು ಹೇಗೆ ಸ್ವಾರಸ್ಯವತ್ತಾಗಿ ರಚಿತವಾಗಿದೆ ಎಂಬುದನ್ನು ಲಕ್ಷಿಸಬೇಕು, ತೃಪ್ತಿತಾಳಬೇಕು. ಆ ಚಿತ್ರ ಯಾವ ಸಂದೇಶವನ್ನು ನೀಡುತ್ತದೆ ಎಂದು ಪ್ರಶ್ನಿಸಬಾರದು. ಈ ಬಗೆಯ ಗಟ್ಟಿ ಕೂಗಿನಿಂದ ಜನತೆಯಲ್ಲಿ ಆಂದೋಳನ ಉಂಟಾಯಿತು. ಸಾಹಿತ್ಯ ಲೋಕಕ್ಕು ಅದರ ಪ್ರಭಾವ ಬೀರಿತು.  ಥಿಯೊಫೈಲ್ ಗೌತಿಯರ್ (೧೮೧೧-೭೨) ಕಲೆಗಾಗಿ ಕಲೆ ಎಂಬ ಧ್ಯೇಯ ಮಂತ್ರವನ್ನು ೧೮೫೨ರಲ್ಲಿ ಸಾರಿದ. ನುರಿತ ಅಕ್ಕಸಾಲೆ ನಾಜೂಕು ನಗವನ್ನು ತಯಾರಿಸುವ ಚಾಕಚಕ್ಯತೆಯನ್ನು ಮೆರೆಸುವಂತೆ ತನ್ನ ಕವಿತೆಯನ್ನು ತಾನು ರಚನೆಗೈಯುವುದಾಗಿ ಆತ ಹೇಳುತ್ತಿದ್ದ. ಅವನಿಗಿಂತ ಕೊಂಚ ಚಿಕ್ಕವನಾದ ಚಾರಲ್ಸ್‌ ಬೋದಿಲೇರ್ ೧೮೨೧-೧೮೬೭ರಲ್ಲಿ ಆ ಮಂತ್ರಕ್ಕೆ ದೃಢವಾದ ಬೆಂಬಲವನ್ನು ಕೊಟ್ಟ. ಅವನ ಲೆ ಫ್ಲೂರ್ ದು ಮಾಲ್ (೧೮೫೭) ಶಬ್ದ ಸಂಯೋಜನೆಯ ದೃಷ್ಟಿಯಿಂದ, ರಮ್ಯ ಕಲೆಯ ದೃಷ್ಟಿಯಿಂದ ಅತ್ಯುತ್ಕೃಷ್ಟ ಕವನಸಂಗ್ರಹ.

ಹಲಕೆಲವು ರೀತಿನೀತಿಗಳಲ್ಲಿ ಫ್ರಾನ್ಸಿನ ಮೇಲ್ಪಂಕ್ತಿಯನ್ನು ಅನುಸರಿಸುವುದು ಯುರೋಪಿನ ಇತರ ದೇಶಗಳಿಗೂ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೂ ಒದಗಿಬಂದ ವಾಡಿಕೆ. ಇಂಗ್ಲೆಂಡಿನಲ್ಲಿ ಸ್ವಿನ್ಬರ್ನ್ (ಸು.೧೮೬೬), ಪೇಡರ್ ಮುಂತಾದ ಕವಿಗಳೂ ವ್ಹಿಸ್ಲರ್ (ಸು.೧೮೮೫) ಮುಂತಾದ ಚಿತ್ರಕಾರರು ತೀವ್ರವಾದ ಹೇಳಿಕೆಗಳನ್ನೂ ಪ್ರಯೋಗಗಳನ್ನೂ ಮಾಡಲಾರಂಭಿಸಿದರು. ಅವರಿಗೆ ಪ್ರಬಲ ವಿಮರ್ಶಕನಾದ ಮ್ಯಾಥ್ಯೂಅರ್ನಾಲ್ಡ್‌ನ ಮೇಲೆ ಹೆಚ್ಚು ಗಮನ. ಏತಕ್ಕೆಂದರೆ ಆತ ಕಾವ್ಯವಸ್ತು, ಅದರ ಗಾಂಭೀರ್ಯ, ಭವ್ಯತೆ, ಅದು ಬೋಧಿಸುವ ಶೀಲ ಧರ್ಮ ಇತ್ಯಾದಿ ಅಂಶಗಳನ್ನು ಪುನಃ ಪುನಃ ಒತ್ತಿ ಹೇಳುತ್ತಿದ್ದ. ಅದರಿಂದಾಗಿ ಸಾಹಿತ್ಯ ಲೋಕದಲ್ಲಿ ವಿಪುಲವಾದ ಚರ್ಚೆಗೆ ಅವಕಾಶ ಲಭಿಸಿತು.

ದುರದೃಷ್ಟದಿಂದ ಇಳಿಗತಿ (ಡೆಕಡೆನ್ಸ್‌) ಎಂಬ ಇನ್ನೊಂದು ಅಭಿಪ್ರಾಯ ಅದೇ ಸಮಯದಲ್ಲಿ ಎದ್ದು ಬಂದು, ಕಲೆಗಾಗಿ ಕಲೆ ಎಂಬುದರೊಡನೆ ನಂಟು ಪಡೆಯಿತು. ಈ ಎರಡೂ ದೂಷ್ಯವಾದುವು. ಏಕಾಗ್ರ ಚಿತ್ತದಿಂದ ಕಲೆಗಾರ ತನ್ನ ಕೃತಿಯನ್ನು ಸೃಜಿಸ ಹೊರಟರೆ ಅದೆಂದಿಗೂ ತಪ್ಪಲ್ಲ. ಆದರೆ ಅವನ ಕಲೆಗಾರಿಕೆ ಬರಿಯ ಕಾಮವಿಕಾರ, ಅತಿಚರ್ಯೆ, ಸ್ವೇಚ್ಛೆಯಾದ ದುಷ್ಟತನ-ಇತ್ಯಾದಿಗಳಿಗೇ ಸೊಗಸನ್ನು ಅಂಟಿಸುವ ಪ್ರಯತ್ನಕ್ಕೆ ಮೀಸಲಾದರೆ ಕಷ್ಟ. ಬೋದಿಲೇರಿನ ಕೆಡುಕಿನ ಹೂಗಳು ಸ್ವಿನ್ಬರ್ನನ ಆಳ್ವಿಕೆಯಲ್ಲಿ ದುರಾಚಾರದ ಗುಲಾಬಿಗಳೂ ಸಮ್ಮೋದಾವೇಶಗಳೂ (ದಿ ರೋಸಸ್ ಅಂಡ್ ರ್ಯಾಪ್ಚರ್ಸ್‌ ಆಫ್ ವೈಸ್) ಆದದ್ದು ಸಾಹಿತ್ಯದ ಹೀನ ಭಾಗ್ಯ.

ನೀತಿಬೋಧೆಗಾಗಿ, ಧರ್ಮಪ್ರಚಾರಕ್ಕಾಗಿ, ಪ್ರಭು ಪ್ರಶಂಸೆಗಾಗಿ, ಅಥವಾ ಕಲೆಗಾರನ ಸ್ವಂತ ಪ್ರಯೋಜನಕ್ಕಾಗಿ, ಪ್ರಶಸ್ತಿಗಾಗಿ ಹಿಂದೆ ಸಾಹಿತ್ಯಾದಿ ಲಲಿತಕಲೆಗಳು ಅವಶ್ಯಕವಾಗಿದ್ದುವು- ಯಾವುದೋ ಒಂದು ಸಾಮಾಜಿಕ ಧ್ಯೇಯ ಕಲೆಯನ್ನು ನಡೆಸದಿದ್ದರೆ ಅದು ವೃಥಾ ಅರಣ್ಯರೋದನವಾದೀತು ಎಂಬುದು ಮಂದಿಯ ನಂಬಿಕೆಯಾಗಿತ್ತು. ಈಗ ಸರ್ವಾಧಿಕಾರಕ್ಕೆ ಅಥವಾ ಸಮತಾವಾದಕ್ಕೆ ಒಳಗಾದ ರಾಷ್ಟ್ರಗಳ ಹೊರತು ಮಿಕ್ಕೆಲ್ಲ ರಾಷ್ಟ್ರಗಳಲ್ಲೂ ಆ ನಂಬಿಕೆ ಸಡಿಲಹೋಗಿದೆ.

ಕಲಾ ಪ್ರಪಂಚದಲ್ಲಿ ಈ ವಿಧದ ಸ್ವಾತಂತ್ರ್ಯದಾಹ ಉಲ್ಬಣವಾದುದಕ್ಕೆ ಕಾರಣಗಳು ಹಲವಾರು. ಕಲಾಕೃತಿಯ ಅಪೇಕ್ಷೆ ಜನ ಸಂದೋಹದಲ್ಲಿ ಹೆಚ್ಚು ಹೆಚ್ಚಾಗಿ ಬೆಳೆದಿದ್ದರಿಂದ ಕಲೆಗಾರನಿಗೆ ಆಶ್ರಯದಾತನ ಹಂಗು ಕಡಿಮೆಯಾಯಿತು. ಸಾವಿರಾರು ಮಂದಿ ದುಡ್ಡು ಕೊಟ್ಟು ಸಂಗೀತವನ್ನು ಆಲಿಸುತ್ತಾರೆ. ಚಿತ್ರಗಳನ್ನು ವೀಕ್ಷಿಸುತ್ತಾರೆ, ಪುಸ್ತಕವನ್ನು ಕೊಂಡು ಓದುತ್ತಾರೆ. ಕಲೆಗಾರ ಶುದ್ಧ ಸೋಮಾರಿ, ಒಂದು ಕಡ್ಡಿಯನ್ನು ಆ ಕಡೆಯಿಂದ ಈ ಕಡೆಗೆ ಎತ್ತಿಡಲಾರದ ಪರಾವಲಂಬಿ, ಸಮಾಜಕ್ಕೆ ಹೊರೆ-ಎಂಬ ಅಭಿಶಾಪ ಬಹುಮಟ್ಟಿಗೆ ಕಣ್ಮರೆಯಾಗಿದೆ. ಪ್ರಜಾಪ್ರಭುತ್ವ ಅನೇಕ ಪ್ರದೇಶಗಳಲ್ಲಿ ಏರ್ಪಟ್ಟಿರುವುದರಿಂದ ಕಲೆಗಾರನಿಗೂ ಹಕ್ಕುಗಳು ಸಂದು ಬಂದಿವೆ. ಕೇವಲ ಸಾಂಪ್ರದಾಯಿಕವಾದರೆ, ಚರ್ವಿತಚರ್ವಣವಾದರೆ, ಕಲೆಗೆ ಪ್ರಗತಿಯಿಲ್ಲ, ಶ್ರೇಯಸ್ಸುಬಾರದು-ಎಂಬ ಸತ್ಯಾಂಶ ನೈಜ ಕಲೆಗಾರರಿಗೆ ಮಂದಟ್ಟಾಗಿದೆ. ಅದಕ್ಕೋಸ್ಕರ ಹಳೆಯದನ್ನು ಬಿಡದೆ ಹೊಸದನ್ನು ನಿರ್ಮಿಸುವ ಹುರುಪು ಅವರಲ್ಲಿ ಬೆಳೆದಿದೆ.

ಹೀಗೆಂದ ಪಕ್ಷಕ್ಕೆ ಈ ವಿಷಯವಾಗಿ ಇದಮಿತ್ಥಂ ಎಂದು ತೀರ್ಮಾನ ನುಡಿಯಬಹುದು ಎಂದು ಯಾರೂ ಊಹಿಸಬಾರದು. ವಿಷಯ ದಿಟವಾಗಿ ಜಟಿಲವಾದದ್ದು. ಕವಿಗೆ ಸಮಾಜ ಬೇಕು, ಓದುಗರೂ ಬೇಕು. ಎಂದಮೇಲೆ ಸಮಾಜವನ್ನೂ ಓದುಗರನ್ನೂ ಮನವೊಪ್ಪಿಸುವ ಹೊಣೆಗಾರಿಕೆ ಅವನ ಮೇಲಿದೆ ಎಂದಂತಾಯಿತು. ಕವಿಗೆ ಯಾವ ಬಗೆಯ ಸ್ವಾತಂತ್ರ್ಯ, ಎಷ್ಟರಮಟ್ಟಿಗೆ-ಇತ್ಯಾದಿ ಸಮಸ್ಯೆಗಳಿಂದ ಈ ವಿಚಾರ ಗಹನವಾಗಿದೆ. ಆಯಾ ತಲೆಮಾರು, ಆಯಾ ದೇಶ, ಸೂಕ್ತವಾಗಿ ಸಮಸ್ಯೆಗಳನ್ನು ಬಿಡಿಸಿಕೊಳ್ಳಬೇಕು. ಈಗ ಕಟು ಆಕ್ಷೇಪಣೆಯಾಗಲಿ ಕಹಿ ವಾಗ್ವಾದವಾಗಲಿ ಕಾಣಬರುತ್ತಿಲ್ಲ.
ಒಟ್ಟಿನಲ್ಲಿ, ಕಲೆಗಾಗಿ ಕಲೆ ಎಂಬ ಘೋಷಣೆಯಿಂದ ಒಂದೆರಡು ಸತ್ಫಲಗಳೇ ದೊರೆತಿವೆ. ತನ್ನ ವೃತ್ತಿಯನ್ನು ಕುರಿತು ಕಲೆಗಾರನಿಗೆ ಜವಾಬ್ದಾರಿ. ರಸಿಕವರ್ಗಕ್ಕೆ ಕಲೆಗಾರರನ್ನು ಕಂಡು ಗೌರವ ಇರಬೇಕಾದ್ದು ನಿರ್ವಿವಾದ. ಕಾವ್ಯಕೃತಿಯ ವಸ್ತುವಾದ ಭಾವ ಭಾವನೆಗಳ ಸಮುದಾಯ ಎಷ್ಟೇ ಪ್ರಮುಖವಾದರೂ ಅವುಗಳ ಸಂಯೋಜನೆ ನಿರೂಪಣೆಯ ವಿಧಾನ, ಶಬ್ದ ಸಂಪತ್ತು, ಶೈಲಿ ಮುಂತಾದ ಕಾವ್ಯಾಂಗಗಳನ್ನೂ ಕಾವ್ಯದ ಘನೋದ್ದೇಶವನ್ನೂ ಅಲಕ್ಷಿಸುವಂತಿಲ್ಲ. ಇದು ಗೃಹೀತ ತತ್ತ್ವವಾಗಿದೆ.	(ಎಸ್.ವಿ.ಆರ್.)

ಕಲೆ ಮತ್ತು ಜೀವನ
ಪ್ರಾಚೀನ ಗ್ರೀಕರಿಗೂ ರೋಮನರಿಗೂ ಜೀವನವೆಂದರೆ ಮನುಷ್ಯಜೀವನವೆಂದೇ ಅರ್ಥ. ಪಶು, ಪಕ್ಷಿ ಮುಂತಾದ ಮಾನವೇತರ ಜೀವಿಗಳ ಪ್ರಪಂಚವನ್ನಾಗಲಿ ಭೌತಪ್ರಕೃತಿಯ ಪ್ರಪಂಚವನ್ನಾಗಲಿ ಅವರು ಲಕ್ಷ್ಯಕ್ಕೆ ಅಷ್ಟಾಗಿ ತೆಗೆದುಕೊಳ್ಳಲಿಲ್ಲ. ಈಗ ಅವಕ್ಕೂ ಚೈತನ್ಯ ಅಸ್ತಿತ್ವ, ಗುಣಲಕ್ಷಣ, ಇರುವುವೆಂದು ನಂಬಿಕೆ. ಜೀವನವೆಂಬ ತತ್ತ್ವ ವಿಶಾಲ ವ್ಯಾಪ್ತಿಯುಳ್ಳದ್ದು. ಕಲಾವಿದರು ಈ ಮೂರರಲ್ಲಿ ಯಾವುದರಿಂದ ಬೇಕಾದರೂ ವಿಷಯ ಸಾಮಗ್ರಿಯನ್ನು ಪಡೆಯಬಹುದು. ಹೀಗಿದ್ದರೂ ಮನುಷ್ಯ ಜೀವನಕ್ಕೆ ಮುಖ್ಯ ಸ್ಥಾನವನ್ನು ಕೊಟ್ಟು ಮಿಕ್ಕ ಎರಡನ್ನು ಹಿನ್ನಲೆಯಾಗಿಯೋ ಸಹಾಯಕವಾಗಿಯೋ ಬಳಸಿಕೊಳ್ಳುವುದೇ ಹೆಚ್ಚು.

ಕಲೆಯ ಚಟುವಟಿಕೆ ಬೇರೆ, ಜೀವನದ ವ್ಯಾಪಾರ ಬೇರೆ; ಎರಡಕ್ಕೂ ಮಧ್ಯೆ ದಾಟಲಾಗದ ಭಾರಿ ಕಮರಿ ಉಂಟು ಎಂಬ ಭಾವನೆ ಕೆಲವರಲ್ಲಾದರೂ ಮನೆಮಾಡಿದೆ. ಉದ್ದೇಶ, ಕಾರ್ಯ, ಫಲ ಎಲ್ಲದರಲ್ಲೂ ಅವೆರಡಕ್ಕೆ ತುಂಬ ವ್ಯತ್ಯಾಸವಿದೆಯಾದ್ದರಿಂದ ಅವುಗಳ ಪರಸ್ಪರ ಸಂಬಂಧವನ್ನು ಚರ್ಚಿಸಿ ಪ್ರಯೋಜನವಿಲ್ಲವೆಂಬ ಅನುಮತಿ ಈ ಭಾವನೆಯಿಂದ ಉತ್ಪನ್ನವಾಗುತ್ತದೆ. ತೀರ ವಿರುದ್ಧ ಪದಾರ್ಥಗಳನ್ನು ಒಂದರ ಜೊತೆ ಇನ್ನೊಂದನ್ನು ಇಡಲು ಆಗದು. ಇಂಥ ವಿಪರೀತ ಅಭಿಪ್ರಾಯಕ್ಕೆ ಪ್ರತಿಯಾಗಿ ಕಲೆಗೂ ಜೀವನಕ್ಕೂ ನಿಕಟ ಬಾಂಧ್ಯವ್ಯ ಉಂಟೆಂಬ ಅಭಿಪ್ರಾಯ ಉಳ್ಳವರೇ ಹೆಚ್ಚು. ಆ ಅಭಿಪ್ರಾಯದಲ್ಲೇ ಅಧಿಕ ಸತ್ಯಾಂಶವಿರುವಂತಿದೆ. ಜೀವನದಿಂದ ದೂರಹೋಗಿ ಜೀವನವನ್ನು ಮರೆತು ಮತ್ತೇನನ್ನು ಮನುಷ್ಯ ಧ್ಯಾನಿಸಬಹುದು, ಆಲೋಚಿಸಬಹುದು, ಚಿತ್ರಿಸಬಹುದು? ಜೀವನದಿಂದ ಆಚೆ ಶೂನ್ಯ. ಶೂನ್ಯವೆಂದರೆ ಏನೂ ಇಲ್ಲದಿರುವಿಕೆ. 

ಜೀವನದ ಎಣಿಸಲಾಗದ ಅಂಶಗಳಲ್ಲಿ ತಮ್ಮ ತಮ್ಮ ಮನಸ್ಸಿಗೆ ಹಿಡಿಸಿದುದನ್ನು ಕಲಾವಿದರು ಆರಿಸಿಕೊಂಡು ಅದಕ್ಕೆ ತಮ್ಮ ತಮ್ಮ ವಾಹಕಗಳ ಮೂಲಕ ರೂಪು ಕೊಡುತ್ತಾರೆ. ಹಾಗೆ ಮಾಡುವಾಗ ಅವರು ಅನುಸರಿಸಬಹುದಾದ ಕ್ರಮಗಳು ಸ್ಥೂಲವಾಗಿ ಮೂರು. ಇದ್ದುದನ್ನು ಹೆಚ್ಚಿಸದೆ ಕಡಿಮೆ ಮಾಡದೆ ಇದ್ದ ಹಾಗೆಯೆ ನಿರೂಪಿಸುವ ವಿಧಾನ ಮೊದಲನೆಯದು. ಆದರೆ ಕಲೆಯ ಇತಿಹಾಸದಲ್ಲಿ ಆ ಮಾರ್ಗ ಸೂಕ್ತವೂ ಅನುಷ್ಠಾನಯೋಗ್ಯವೂ ಮೇಲ್ಮಟ್ಟಕ್ಕೆ ಏರಬಲ್ಲದ್ದೂ ಆಗಿದೆ ಎಂದು ಕಂಡುಬಂದದ್ದು ಈಚೀಚೆಗೆ. ವಾಸ್ತವಿಕತೆ ಕಲೆಯ ಸರಹದ್ದಿನೊಳಕ್ಕೆ ಜೋರಾಗಿ ಪ್ರವೇಶಮಾಡಿದ್ದು ೧೯ನೆಯ ಶತಮಾನದಲ್ಲಿ.
ಎರಡನೆಯ ಕ್ರಮವೆಂದರೆ ಹಿಂದಿನಿಂದಲೂ ರೂಢಿಗೆ ಬಂದಿದ್ದ ಕ್ರಮ ಜೀವನವನ್ನು ಕಲಾವಿದ ಒಂದಲ್ಲ ಒಂದು ಬಗೆಯಲ್ಲಿ ಅಷ್ಟೋ ಇಷ್ಟೋ ಪ್ರಮಾಣದಲ್ಲಿ ಅತಿಶಯಿಸುವಿಕೆ. ಅದಕ್ಕೆ ಜೀವನವನ್ನು ಕುರಿತ ಒಂದು ತಾತ್ತ್ವಿಕ ನಂಬಿಕೆ ಆಧಾರ. ವ್ಯಕ್ತಿಯ ಬಹಿರಂಗ ಚಲನವಲನಕ್ಕಿಂತ ಅವನ ಅಂತರಂಗ ಜೀವನ ಅವನ ನೈಜ ವ್ಯಕ್ತಿತ್ವವನ್ನು ಹೊರಗೆಡಹುತ್ತದೆ. ವ್ಯಕ್ತಿಯ ಒಳಗಡೆ ಅವನ ಪ್ರಕೃತಿ ಸ್ವಭಾವ ನಡೆಯುತ್ತಿರುತ್ತದೆ. ಅದರಲ್ಲಿ ವ್ಯಕ್ತಿಯ ಸಾಮಾನ್ಯ ಲಕ್ಷಣದಂತೆ ವಿಶಿಷ್ಟ ಲಕ್ಷಣವೂ ಉಂಟು. ಕಲಾವಿದ ತನ್ನ ಒಳದೃಷ್ಟಿಯನ್ನು ಹರಿಸಿ ವ್ಯಕ್ತಿಯ ವ್ಯಕ್ತಿತ್ವವನ್ನು ಚೆನ್ನಾಗಿ ಗ್ರಹಿಸಿ ಕಲ್ಪನೆಯನ್ನು ಭಾವಿಸಿಕೊಂಡು ಅದನ್ನು ಹೊರತರುತ್ತಾನೆ. ಇದೇ ಅತಿಶಯಗೊಳಿಸಿಕೆ ಅಥವಾ ಆದರ್ಶೀಕರಣ. ವ್ಯಕ್ತಿಯಲ್ಲಿ ಇದ್ದೇ ಇರುವ ಕೊರೆ ಕೋಚು ಎಲ್ಲವನ್ನೂ ಅಳಿಸಿಬಿಟ್ಟು ಲೋಪದೋಷಗಳನ್ನು ಮರೆಮಾಡಿ ಗುಣಗಳನ್ನು ಹೆಚ್ಚಿಸಿ ಅವನ ಚಾರಿತ್ರ್ಯವನ್ನು ಉಲ್ಲೇಖಿಸಿರುವುದೂ ಉಂಟು. ಪಟ್ಟಣಗಳನ್ನು ಸುಟ್ಟು ಸಾಮ್ರಾಜ್ಯಗಳನ್ನೇ ಧ್ವಂಸಮಾಡಿದ ಜಗಜ್ಜೇತರಾದ ಶೂರರು ನಿಜಕ್ಕೂ ಉಂಟು. ಹೋಮರನ ಅಕಿಲೀಸ್, ಏಜಾಕ್ಸ್‌, ಹೆಕ್ಟರ್-ಮೊದಲಾದ ಪೌರಾಣಿಕ ಮಹಾಪುರುಷರು ಬದುಕಿಬಾಳಿದ ಆ ವೀರಾಗ್ರಣಿಗಳಿಗಿಂತ ಅಧಿಕ ತೇಜಸ್ಸಿನವರು. ಮಾನವ ಸಾಹಸ ಎಷ್ಟು ದೂರ ಹೋಗಬಹುದೋ ಅಷ್ಟು ದೂರ ಹೋಗಿರುವುದನ್ನು ಕವಿಗಳು ನಿರೂಪಿಸುತ್ತಾರೆ, ಶಿಲ್ಪಿಗಳು ಕೆತ್ತಿ ತೋರಿಸುತ್ತಾರೆ, ಚಿತ್ರಕಾರರು ಚಿತ್ರಿಸುತ್ತಾರೆ. ಅಕಿಲೀಸನಂಥ ವೀರಮಾನವ ಯಥಾರ್ಥವಾಗಿ ಇರಲಾರ. ಆದರೂ ಇರಬಹುದು. ಇದೇ ಜೀವನದ ವಾಸ್ತವ ಸತ್ಯಕ್ಕೂ ಕಲೆಯ ವಿಭಾವನಾ ಸತ್ಯಕ್ಕೂ ಇರುವ ಸಾಮ್ಯ, ವೈಷಮ್ಯ.

ಮೂರನೆಯ ಕ್ರಮವೆಂದರೆ ಜೀವನವನ್ನು ಇದಕ್ಕಿಂತ ಕೀಳಾಗಿಸಿ ಹೀನಾಯಿಸಿ ತೋರುವುದು. ವಾಸ್ತವತೆ, ಸ್ವಭಾವತೆ ಎಂಬ ತತ್ತ್ವಗಳ ಹೆಸರಿನಲ್ಲಿ ಈ ವಿಧದ ಅಸಹ್ಯಾತಿರೇಕ ಆಗಬಹುದು, ಆಗಿದೆ. ಕಲಾಕೃತಿ ಅಚ್ಚುಕಟ್ಟಾಗಿ ಅಂದಚೆಂದದಿಂದ ಸಂತಸಗೊಳಿಸಬೇಕು ಎಂಬ ವಿಧಿಯನ್ನು ನೇಮವಾಗಿಟ್ಟುಕೊಂಡರೆ ಅಸಹ್ಯಾತಿರೇಕ ಕುರೂಪವಾಗುತ್ತದೆ. ಆದರೂ ಕುರೂಪದ ವಿಷಯವಾಗಿ ಒಂದು ವಿಚಿತ್ರ ಸಂಗತಿಯುಂಟು. ಲಾವಣ್ಯವನ್ನು ವಾಸ್ತವತೆಗಿಂತ ಅತಿಶಯಗೊಳಿಸುವಂತೆ ಕುರೂಪವನ್ನೂ ಅತಿಶಯಗೊಳಿಸಬಹುದು. ಹಾಗೆ ಮಾಡಿದಾಗ ಕಲಾವಿದನ ಮಾಂತ್ರಿಕತೆಯಿಂದಲೋ ಏನೋ ಅದೇ ಒಂದು ಬಗೆಯ ಸುರೂಪವಾಗುತ್ತದೆ. ಕನಕದಾಸ ಕರ್ಕೋಟಕ ಕಚ್ಚಿದ ನಳನನ್ನು ಬಣ್ಣಿಸಿರುವ ರೀತಿ, ವಿಕ್ಟರ್ ಹ್ಯೂಗೋ ಒಂದು ಭವ್ಯ ಚರ್ಚಿನ ಸೇವಕ ಪ್ರಸಿದ್ಧ ಗೂನನನ್ನು ಚಿತ್ರಿಸಿರುವ ರೀತಿ ಇದಕ್ಕೆ ಉದಾಹರಣೆ. ಎರಡರಿಂದಲೂ ನಮಗೆ ದೊರಕುವ ಕಾವ್ಯಾಹ್ಲಾದ ಮಿಗಿಲು. ಕಲೆಯ ಸ್ವರೂಪ, ಸ್ವಧರ್ಮ, ಸ್ವಭಾವಗಳನ್ನು ವಿಚಾರಿಸುವಾಗ ಸೌಂದರ್ಯವೆಂಬ ಶಬ್ದವನ್ನು ಎಷ್ಟು ಕಡಿಮೆಯಾಗಿ ಬಳಸಿಕೊಂಡರೆ ಅಷ್ಟು ಕ್ಷೇಮ. ಏತಕ್ಕೆಂದರೆ ಆ ಶಬ್ದಕ್ಕೆ ಮನವೊಪ್ಪಿಸುವ ರೀತಿಯಲ್ಲಿ ಖಚಿತಾರ್ಥವನ್ನು ಯಾರೂ ಕೊಟ್ಟಿಲ್ಲ, ಪ್ರಾಯಶಃ ಕೊಡಲಾರರು.

ಕಲೆ ಪದಾರ್ಥತಿಷ್ಠವೋ ಭಾವ ಭಾವನಾತಿಷ್ಠವೋ ಎಂಬ ಜಿಜ್ಞಾಸೆ ಬಹುವಾಗಿ ನಡೆದಿದೆ. ಜೀವನ ಕಲೆಗಾರನ ಪ್ರಚೋಧನೆಗಾಗಿ ಮುಂದಿಡುವ ಪದಾರ್ಥವೂ ಬೇಕು; ಕಲೆಗಾರನ ಪ್ರತಿಕ್ರಿಯೆಯಾದ ಭಾವ, ಭಾವನೆ ಮುಂತಾದುವೂ ಬೇಕು. ಒಂದು ಇದ್ದು ಇನ್ನೊಂದು ಇಲ್ಲದಿದ್ದರೆ ಕಲಾಕೃತಿ ಜನಿಸುವುದು ಅಶಕ್ಯ. ಬಾಹ್ಯ ವಸ್ತುಗಳು, ಜೀವನದ ಅಂಶಗಳು-ಎರಡೂ ಅಗತ್ಯ. ಕಲೆಗಾರನೆಂಬ ವ್ಯಕ್ತಿಯೂ ಅವನ ಆಂತರ್ಯದ ತುಡಿತ ಮಿಡಿತಗಳೂ ಜೀವನದ ಅಂಶಗಳು. ಆದ್ದರಿಂದ ಜೀವನವನ್ನು ಬಿಟ್ಟು ಕಲೆ ಎಂಬುದಿಲ್ಲ.

ಚರಿತ್ರೆ, ತತ್ತ್ವಶಾಸ್ತ್ರ, ವಿಜ್ಞಾನ, ಲಲಿತಕಲೆ ಎಲ್ಲವೂ ಜೀವನಕ್ಕೆ ಬಲು ಹತ್ತಿರದ ಸಂಬಂಧವನ್ನು ಉಳ್ಳವು. ಜೀವನದ ಪ್ರಸಂಗಗಳ ನಿಜವರದಿಯೇ ಚರಿತ್ರೆ. ಜೀವನದ ಆಕಾಂಕ್ಷೆ, ಅರ್ಥ, ಸಾರ್ಥಕ್ಯಗಳನ್ನು ಪರಿಶೀಲಿಸಿ ಸಿದ್ಧಾಂತಗಳನ್ನು ಹೇಳುವುದೇ ತತ್ತ್ವಶಾಸ್ತ್ರ. ವಸ್ತುಗಳು ಹೇಗೆ ರಚಿತವಾಗಿವೆ, ಹೇಗೆ ಆಕೃತಿವಿಕಾರ ಹೊಂದುತ್ತವೆ-ಮುಂತಾದ ವಿಚಾರಗಳನ್ನು ಯಂತ್ರಗಳ ಮೂಲಕವೂ ಗಾಢ ಚಿಂತನೆಯ ಮೂಲಕವೂ ಪರೀಕ್ಷಿಸಿ ನಿರ್ಣಯಗಳನ್ನು ತಿಳಿಯಹೇಳುವುದೇ ವಿಜ್ಞಾನ. ಇವು ಮೂರಕ್ಕೂ ಬುದ್ಧಿ ಶಕ್ತಿಯೇ ಪ್ರಮಾಣ, ಬುದ್ಧಿಶಕ್ತಿಗೇ ಇವುಗಳ ಸಂಬೋಧನೆ, ಕಲೆಯಾದರೋ ಮನುಷ್ಯನ ಮನಸ್ಸು, ಚಿತ್ರ, ಹೃದಯ, ಆತ್ಮ ಎಲ್ಲವನ್ನೂ ಒಳಗೊಂಡು ಪುರ್ತಿ ಮಾನವತೆಯ ನಡೆವಳಿಕೆಯ ಅನುಭವವನ್ನು ತಂದುಕೊಡುತ್ತದೆ. ಜೀವನದ ಸಮಗ್ರ ಪರಿಚಯ ನಮಗೆ ದೊರಕುವುದು ಕಲೆಯಲ್ಲೇ.	(ಎಸ್.ವಿ.ಆರ್.)

ಕಲೆ ಮತ್ತು ನೀತಿ
ಈ ವಿಷಯವನ್ನು ಚರ್ಚಿಸುವಾಗ ಎರಡು ಮುಖ್ಯ ಪ್ರಶ್ನೆಗಳು ನಮ್ಮೆದುರಿಗೆ ನಿಲ್ಲುತ್ತವೆ. ಒಂದು ಕಲಾವಿದನಿಗೆ ಸಂಬಂಧಿಸಿದ್ದು; ಇನ್ನೊಂದು ಕಲಾಸ್ವಾದಿ ವರ್ಗಕ್ಕೆ ಸಂಬಂಧಿಸಿದ್ದು.
ಕಲೆಗಾರ ಸೌಶೀಲ್ಯವಂತನಾಗಿರಲೇಬೇಕೆ? ಸ್ವಭಾವದಲ್ಲೂ ನಡತೆಯಲ್ಲೂ ಅಶುಚಿಯಾದವನು ಉತ್ತಮ ಕಲಾಕೃತಿಯನ್ನು ನಿರ್ಮಿಸಲಾರನೆ? ಕಲಾವಿದನಿಗೂ ಅವನ ನಿರ್ಮಿತವಾದ ಕಲಾವಸ್ತುವಿಗೂ ಈ ಬಗೆಯ ಕಾರ್ಯಕಾರಣತ್ವವನ್ನು ಅನ್ವಯಿಸುವುದು ಸರಿ, ನ್ಯಾಯ, ತರ್ಕಸಮ್ಮತ ಎಂದು ಭಾಸವಾಗಬಹುದು. ಆದರೆ ಕಲೆಯ ಇತಿಹಾಸದಲ್ಲಿ ನಿಶ್ಚಯವಾಗಿ ಆಗಿರುವ ವಿದ್ಯಾಮಾನಗಳನ್ನು ಕೊಂಚಮಟ್ಟಿಗೆ ಪರಿಶೀಲಿಸಿದರೂ ಸಾಕು ; ಅಂಥ ನಿರ್ಧಾರಕ್ಕೆ ಸಾಕ್ಷ್ಯ ದೊರಕುವುದಿಲ್ಲ. ಸಾವಿರಾರು ಕಲೆಗಾರರಲ್ಲಿ ಎಷ್ಟೋ ಮಂದಿ ತಮ್ಮ ಗುಣದಲ್ಲೂ ಶೀಲದಲ್ಲೂ ಕಲುಷಿತರು ಎಂಬುದನ್ನು ಮರೆಮಾಚುವಂತಿಲ್ಲ. ಮುಂಗೋಪ, ಅಹಂಕಾರ ಲೋಭ, ಹೊಟ್ಟೆಕಿಚ್ಚು ಮೊದಲಾದ ಸಾಮಾನ್ಯ ದೋಷಗಳೇ ಅಲ್ಲದೆ ವಂಚನೆ, ವಿಷಯಲಾಂಪಟ್ಯ, ದ್ರೋಹ, ಮುಂತಾದ ಕಲಂಕಗಳು ಅವರಲ್ಲಿ ಕಂಡುಬರುತ್ತವೆ. ಅವರ ಕಲಾನಿರ್ಮಿತಿಗಳಾದರೋ ಹೆಚ್ಚು ಕಡಿಮೆ, ನಿರ್ದಿಷ್ಟ, ಸೊಗಸು, ಮಹೋತ್ಕೃಷ್ಟ. ಕೆಲವು ನಗರಗಳಲ್ಲಿ ಕಲಾವಿದರ ಕೇರಿ ಎಂಬ ಪ್ರತ್ಯೇಕ ಭಾಗ ಉಂಟು. ಅಲ್ಲಿ ಸಭ್ಯ ಸಮಾಜದ ಭಾಗವಾದ ರೀತಿನೀತಿಗೆ ಅವಕಾಶ ತೀರ ಕಡಿಮೆ. ಅಲ್ಲಿ ಕಷ್ಟಕಾರ್ಪಣ್ಯಗಳಿಂದ ಮೊದಲು ತೊಳಲುತ್ತ ಕಲಾದೇವಿಯ ಅನುಗ್ರಹಕ್ಕೆ ಹೇಗೋ ಪಾತ್ರರಾಗಿ ಅತ್ಯುತ್ತಮ ಕೃತಿಗಳನ್ನು ರಚಿಸಿ ಯಥೇಷ್ಟ ಹಣವನ್ನೂ ಕೀರ್ತಿಯನ್ನೂ ಗಳಿಸಿಕೊಂಡು ಸಭ್ಯಸಮಾಜದಲ್ಲಿ ಗಣ್ಯರಾಗಿ ಬಾಳಿದವರುಂಟು. ಅಷ್ಟೇಕೆ, ಭಾರತದ ಹಿಂದಣ ತಲೆಮಾರುಗಳಲ್ಲಿ ನರ್ತನ, ಸಂಗೀತ ಕಲೆಗಳಲ್ಲಿ ಬಹಳ ಪ್ರಸಿದ್ಧರೆಂದು ಹೆಸರಾದವರಲ್ಲಿ ಎಷ್ಟೋ ಮಂದಿ ವೇಶ್ಯೆಯರಿದ್ದರು.

ಕಲಾವಿದನ ಗುಣಶೀಲ ಮತ್ತು ಜೀವನಕ್ರಮ ಅವನಿಗೆ ವೈಯಕ್ತಿಕವಾಗಿ ಹೊಂದಿಕೊಂಡ ವಿಚಾರ. ಅವು ಅವನ ಕಲೋದ್ದೇಶದ ಮೇಲಾಗಲಿ, ಕಲಾವಿಧಾನದ ಮೇಲಾಗಲಿ, ಕಲಾ ನೈಪುಣ್ಯದ ಮೇಲಾಗಲಿ, ಬೀರುವ ಪ್ರಭಾವ ಹೆಚ್ಚಿನದು ಎಂದು ಭಾವಿಸುವುದು ತಪ್ಪಾದೀತು. ಒಂದು ದೃಷ್ಟಿಯಿಂದ ನೋಡಿದರೆ ಕಲಾವಿದ ಯಮಳ ಬದುಕಿನ ಜೀವಿ! ಅವನ ಸ್ವಂತ ಬದುಕು ಒಂದು, ಕಲೆಗಾರನಾಗಿ ಬದುಕು ಇನ್ನೊಂದು. ಎರಡಕ್ಕೂ ಬಾಂಧವ್ಯ ಇದ್ದರೂ ಇರಬಹುದು, ಇಲ್ಲದಿದ್ದರೂ ಆಗುತ್ತದೆ. ಕಲಾವಿದ ಮನುಷ್ಯ ಮಾತ್ರನಾದ್ದರಿಂದ ಕೆಲವು ಕಾಲ ಭೂಮಿಯ ಮೇಲೆ ಇದ್ದು ಆಯುಷ್ಯ ತೀರಿದೊಡನೆ ಅದೃಶ್ಯನಾಗುತ್ತಾನೆ. ಅವನ ಕೃತಿಗಳಾದರೋ ಅನೇಕ ಶತಮಾನ ಹೊಸ ಹೊಸ ತಲೆಮಾರುಗಳಿಗೆ ವಿಶೇಷ ಬಗೆಯ ತಣಿವನ್ನು ನೀಡುತ್ತ ಇರುತ್ತವೆ. ಒಂದು ದೃಷ್ಟಿಯಲ್ಲಿ ಕಲಾವಿದ ಅಲ್ಪಾಯು, ಕಲೆ ಚಿರಾಯು. ಹೊಯ್ಸಳ ದೇವಾಲಯದ ಮದನಿಕೆ  ಪ್ರತಿಮೆಗಳನ್ನು ಕೆತ್ತಿ ನಿಲ್ಲಿಸಿದವರಾರು, ಅವನ ಬಾಳು ಹೇಗಿತ್ತು-ಇತ್ಯಾದಿ ಪ್ರಶ್ನೆಗೆ ಉತ್ತರವೇ ಇಲ್ಲ. ಆ ಪ್ರತಿಮೆಗಳಾದರೋ ಪರಮಾಹ್ಲಾದದ ಬುಗ್ಗೆಗಳು. ಚಿತ್ರಕಾರ ಟಿಷಿಯನ್ ಅಸೂಯಾಪರ; ವಾಗ್ಗೇಯಕಾರರಾದ ಬಾಕ್, ಬೇತೋವನರೂ ಹಾಗೆಯೇ. ರಾಸಿನಿಗೆ ಅತ್ಯಂತ ಜಂಬ. ಇದನ್ನೆಲ್ಲ ಈಗ ಯಾರೂ ಬಗೆಯರು. ಎಲ್ಲರೂ ಅವರ ಉಚ್ಚ ಕೃತಿಗಳ ಅಪೂರ್ವ ಸವಿಯನ್ನು ತಿರುತಿರುಗಿ ಅನುಭವಿಸಲು ಹಾತೊರೆಯುತ್ತಾರೆ.

ಇನ್ನು, ಕಲೆ ಜನರಲ್ಲಿ ಉಂಟುಮಾಡುವ ಪರಿಣಾಮವನ್ನು ಕುರಿತು ಎರಡು ಮಾತು. ಸಾಮಾನ್ಯರಾಗಲಿ, ರಸಜ್ಞರಾಗಲಿ, ವಿಮರ್ಶಕರಾಗಲಿ, ಕಲೆಯಿಂದ ತಮಗೆ ಏನು ಆಗಬೇಕೆಂಬ ಅಪೇಕ್ಷೆಯನ್ನು ಮುಂದಿಟ್ಟುಕೊಂಡೇ ಕಲಾನುಭವಕ್ಕೆ ಕೈ ಹಾಕುತ್ತಾರೆಯೇ? ಚಿತ್ರವನ್ನು ವೀಕ್ಷಿಸುವುದೊ ಸಂಗೀತವನ್ನು ಆಲಿಸುವುದೊ ನಾಟಕವನ್ನು ನೋಡುವುದೊ ಕಾದಂಬರಿಯನ್ನು ಓದುವುದೋ ಯಾವುದೇ ಉದ್ಯಮವಾಗಲಿ ಅದು ಕೇವಲ ಲೌಕಿಕ ಜೀವನದಿಂದ ವ್ಯತ್ಯಸ್ತವಾದ ವ್ಯಾಪಾರ. ಕಲಾಕೃತಿಯಿಂದ ತಮಗೆ ನೀತಿಬೋಧೆ ಒದಗಿ ಅದರಿಂದ ತಮ್ಮ ಜೀವನ ಹೆಚ್ಚು ನೆಟ್ಟಗಾಗಬೇಕೆಂಬುದು ಅವರ ಅಭಿಲಾಷೆಯೆ? ಅಂಥವರು ಇಲ್ಲವೆಂದೇ ಹೇಳಲು ಬಾರದು ; ಆದರೂ ಅವರ ಸಂಖ್ಯೆ ಬಲು ಕಡಿಮೆ. ಅಲ್ಲದೆ ನೀತಿಬೋಧೆ, ಶುಷ್ಕವೂ ಬೇಸರ ತರುವಂಥಾದ್ದೂ ಅಹುದು. ನೀತಿಸೂತ್ರಗಳ ಹೊರೆ ಹೆಚ್ಚಾದಷ್ಟೂ ನೀತಿಭಂಗ ಹೆಚ್ಚು. ಕಲಾವಿದರು ಉಪಾಧ್ಯಾಯರಲ್ಲ, ಧರ್ಮಬೋಧಕರಲ್ಲ; ಅಂದಚೆಂದದ ಕೃತಿಗಳನ್ನು ಹೊರತರುವವರು ಮಾತ್ರ. ಉತ್ತಮ ಕಲಾಕೃತಿಯಿಂದ ಕಲಾಸ್ವಾದಿಗಳಿಗೆ ದೊರಕುವ ಲಾಭ ಇದೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಕೆಲವು ಮಾತುಗಳನ್ನು ವಿವರಿಸಿ ಆ ಲಾಭದ ಲಕ್ಷಣವನ್ನು ಪರಿಚಯ ಮಾಡಿಕೊಡಬಹುದು. ಮೊಟ್ಟಮೊದಲ ಮಾತು ಹರ್ಷ; ಕಾವ್ಯವನ್ನು ಓದಿಯೋ ವಿಗ್ರಹವನ್ನು ನೋಡಿಯೋ ಸಂಗೀತವನ್ನು ಕೇಳಿಯೋ ನಾವು ಸಂತೋಷ ಪಡುತ್ತೇವೆ. ಪ್ರತಿಯೊಂದು ಕಲೆಯೂ ತನ್ನ ತನ್ನ ವಿಧದಲ್ಲಿ ಸಂತೋಷವನ್ನುಂಟುಮಾಡುತ್ತವೆ. ಇಲ್ಲಿ ಒಂದು ವಿಚಾರ ಅಗತ್ಯ. ಸಂತೋಷವೆಂದರೇನು? ಅದರಲ್ಲಿ ದರ್ಜೆಗಳಿಲ್ಲವೆ? ಪರ ಹಿಂಸೆಯಿಂದ, ದೌರ್ಜನ್ಯವೀಕ್ಷಣೆಯಿಂದ ವಿಕೃತ ಕಾಮನೆಗಳಿಂದ ಸಂತೋಷ ಉಂಟಾಗುವುದಿಲ್ಲವೆ? ಇಲ್ಲಿ ಸಂತೋಷವೆಂದರೆ ಶುದ್ಧ ಸಂತೋಷವೆಂದು ಭಾವ. ಸತ್ ಆನಂದ, ಸತ್ ಸಂತೋಷ ಕೊಡುವುದು ಕಲೆಯ ಕೆಲಸ. ಕಲೆ ಒಳ್ಳೆಯದೇ ಕೆಟ್ಟದೇ ಎಂದು ನಿರ್ಧರಿಸುವ ಅಂಶ ಅದರ ಪರಿಣಾಮವಾದ ಆನಂದವನ್ನು ಅವಲಂಬಿಸಿದೆ. ಅದು ಸತ್ಪರಿಣಾಮಕಾರಿಯಾದರೆ ಕಲೆಯೂ ಸತ್ಕಲೆಯಾಗುತ್ತದೆ. ಮನೋವೈಶಾಲ್ಯ ಎಂಬುದು ಎರಡನೆಯ ಮಾತು. ಕಲಾಕೃತಿಯ ಸಂಪರ್ಕದಿಂದ ನಮ್ಮ ಮನಸ್ಸು ವಿಶಾಲವಾದಂತೆ ಅನಿಸುತ್ತದೆ. ನಮ್ಮ ಸ್ವಂತ ಜೀವನದಲ್ಲಿ ನಮಗೆ ದಕ್ಕದ, ಬಹುಶಃ ದಕ್ಕಲಾರದ, ಅಪುರ್ವಾನುಭವ ನಮಗೆ ದೊರೆಯುತ್ತದೆ. ಹೃದಯ ಉಲ್ಲಾಸದಿಂದ ಎದ್ದು ಕುಣಿಯುತ್ತದೆ. ಮನಸ್ಸು ಘನ ಅಭಿಪ್ರಾಯಗಳನ್ನು ತಳೆದು ದೊಡ್ಡದಾಗುತ್ತದೆ. ಮೇಲಾಗಿ ಯಾವುದೋ ಬಗೆಯಲ್ಲಿ ನಮ್ಮ ಆತ್ಮ ಬೆಳೆದು ಎತ್ತರವಾದಂತೆ ತೋರುತ್ತದೆ. ನಮ್ಮ ವ್ಯಕ್ತಿತ್ವದ ಗ್ರಹಿಕೆಗೂ ವಿಕಾಸಕ್ಕೂ ಹೀಗೆ ಕಲೆ ನೆರವಾಗುತ್ತದೆ. ಇವೆಲ್ಲವೂ ಇರುವಾಗ ಬರಿಯ ನೀತಿಮಾಲೆಯನ್ನು ಕಲೆಯಿಂದ ನಿರೀಕ್ಷಿಸಿದರೆ ಅದಕ್ಕೆ ಅನ್ಯಾಯ ಮಾಡಿದಂತೆ. ನೀತಿಯೆಂಬುದನ್ನು ಉದಾರಾರ್ಥದಲ್ಲಿ ತೆಗೆದುಕೊಡರೆ ಮಾತ್ರ ಕಲೆಯೊಳಕ್ಕೆ ಅದನ್ನು ಸೇರಿಸಬಹುದು.	(ಎಸ್.ವಿ.ಆರ್.)

ಕಲೆ ಮತ್ತು ಪ್ರಕೃತಿ
ಕಲೆ ಮತ್ತು ಪ್ರಕೃತಿಗೆ ನಿಕಟ ಸಂಬಂಧವಿದೆಯಾದರೂ ಅದು ಅನ್ಯೋನ್ಯವಲ್ಲ. ಎಂದರೆ, ಪ್ರಕೃತಿಯಿಂದ ಸ್ಫೂರ್ತಿಗೊಂಡ ಭಾವನೆ ಅಥವಾ ಕೃತಿ ಕಲೆ ಎನಿಸಿಕೊಂಡರೂ ಕಲೆಯಿಂದ ಪ್ರಕೃತಿಗೆ ಆಗಬೇಕಾದ್ದೇನೂ ಇಲ್ಲ. ನಮ್ಮ ಭಾವನೆ ಅಥವಾ ದೃಷ್ಟಿ ಪ್ರಕೃತಿಯನ್ನು ಸುಂದರ ಎನ್ನಿಸುವಂತೆ ಮಾಡುತ್ತದೆ, ಆದರೆ ಪ್ರಕೃತಿಯನ್ನು ಸೃಷ್ಟಿಸುವುದಿಲ್ಲ. ಕಲೆಗೂ ಪ್ರಕೃತಿಗೂ ಇರುವ ವ್ಯತ್ಯಾಸ ಇಲ್ಲಿ ಕಂಡುಬರುತ್ತದೆ. ಕಲೆ ಮಾನವ ನಿರ್ಮಿತ, ಪ್ರಕೃತಿ ಸಹಜ. ಪ್ರಕೃತಿಯಲ್ಲಿ ಸಿಗುವ ಅಥವಾ ಸಂಭವಿಸಬಹುದಾದ ವಸ್ತುಗಳನ್ನೇ ಮಾಧ್ಯಮವಾಗಿ ಬಳಸಿಕೊಂಡು ದಕ್ಷನಾದವ ಸೃಷ್ಟಿಸುವ ಕೃತಿ ಕಲೆ. ಹೀಗೆ ಮಾಡುವಲ್ಲಿ ಆತ ಪ್ರಕೃತಿಯ ಅಂಶಗಳನ್ನು ಸಂಪಾದಿಸುತ್ತಾನೆ. ಎಂದರೆ ಕತ್ತರಿ ಪ್ರಯೋಗ ಮಾಡುತ್ತಾನೆ. ತೇಪೆ ಹಾಕುತ್ತಾನೆ, ಜೋಡಿಸುತ್ತಾನೆ, ಅದಕ್ಕೊಂದು ಚೌಕಟ್ಟು ನೀಡುತ್ತಾನೆ. ಪ್ರಕೃತಿಯನ್ನು ಚೌಕಟ್ಟಿನೊಳಗಿಡುವ ತಂತ್ರದಿಂದ ಅದನ್ನು ಪುನರ್ ಸೃಷ್ಟಿ ಮಾಡುತ್ತಾನೆ. ಈ ಕಾರಣದಿಂದ ಅದರ ಚೆಂದ ಅಥವಾ ಸೊಬಗು ಹೆಚ್ಚುತ್ತದೆ. ಎಂದರೆ ಚೌಕಟ್ಟಿನಲ್ಲಿರುವ ದೃಶ್ಯ ಪ್ರಕೃತಿಯೂ ಆಗಿರಬಹುದು, ಸಂಪಾದಿಸಿದ ನವೀನ ರಚನೆಯೂ ಆಗಿರಬಹುದು. ಕಲಾವಿದನ ಹಿರಿಮೆ ಎರಡನೆಯದರಲ್ಲಿ ಕಾಣುವಂತೆ ಮೊದಲನೆಯದರಲ್ಲಿ ಕಂಡುಬರುವುದಿಲ್ಲ. ಕ್ರಿಯಾತ್ಮಕವಾಗಿ, ಭಾವ ಪ್ರಚೋದಕ ಮತ್ತು ಪ್ರಬೋಧಕವಾಗಿ ಸೌಂದರ್ಯಾನುಭವವನ್ನು ನೀಡಿವ ಕೃತಿ ಕಲೆ ಎನಿಸಿಕೊಳ್ಳುತ್ತದೆ. ಎಂದರೆ ಮಾನವ ಮಾಡಿದ್ದೆಲ್ಲ ಕಲೆ ಆಗುವುದಿಲ್ಲ. ಅದರ ವಿಶಿಷ್ಟಗುಣ ಲೋಕ ವ್ಯವಹಾರದಲ್ಲಿ ಪಾಲುಗೊಳ್ಳದಿರುವುದು, ವ್ಯಾವಹಾರಿಕ ಅಥವಾ ಭೌತಿಕ ಮೌಲ್ಯವನ್ನು ನೀಡದಿರುವುದು. ಈ ಕಾರಣದಿಂದ ಅದು ಅಲೌಕಿಕ ಎನಿಸುತ್ತದೆ; ನಾಲಗೆಗೆ ಸಿಗುವ ರುಚಿಗಿಂತ ಹೆಚ್ಚಾಗಿ ವಿಭಿನ್ನವಾಗಿ ಅದು ಆತ್ಮ ಸಂತೃಪ್ತಿಯನ್ನುಂಟುಮಾಡುತ್ತದೆ. ಆದ್ದರಿಂದ ಕಲೆ ನಮ್ಮನ್ನು ನಿರ್ಲಿಪ್ತಗೊಳಿಸುವ ಸುಲಭಸಾಧನ ಎಂದೆನ್ನುತ್ತಾರೆ. ಪ್ರಕೃತಿಯ ಭೌತಿಕ ಅಂಶವಾದ ನಾವು ಪ್ರಕೃತಿಯಿಂದ ಈ ನಿರ್ಲಿಪ್ತತೆಯನ್ನು ಸಾಧಿಸುವುದು ಬಹಳ ಅಪರೂಪ. ಪ್ರಕೃತಿ ನಮಗೆ ಬಾಹ್ಯವಾಗಿಯೇ ಎಂದರೆ ವಾಸ್ತವವಾಗಿಯೇ ಯಾವಾಗಲೂ ನಿಲ್ಲಬಹುದಾಗಿದ್ದರೆ, ನಮ್ಮ ಸಂತಸ ಹೆಚ್ಚಿರುತ್ತಿತ್ತು. ಈ ತೆರನಾದ ಬಾಹ್ಯತೆ, ನಿರ್ಲಿಪ್ತತೆಗಳನ್ನು ಸಂಪಾದಿಸಿದ ಕವಿಗಳೂ ಕಲಾವಿದರೂ ಇತರ ಸಾಮಾನ್ಯರಿಗಿಂತ ಭಿನ್ನರಾಗಿರುವುದು ಈ ಕಾರಣದಿಂದಲೇ. ನಮಗೂ ಪ್ರಕೃತಿಗೂ ಮಧ್ಯೆ ಒಂದು ಸಂಖ್ಯೆಯನ್ನೋ ವಿಗ್ರಹ ರೇಖೆಯನ್ನೋ ಎಳೆದುಕೊಂಡೆವಾದರೆ, ಅದರ ಬಂಧನದಿಂದ ಕಳಚಿಕೊಂಡು ನಾವು ಆತ್ಮಾರಾಮರಾಗುತ್ತೇವೆ ಎಂದು ಸಾಂಖ್ಯರ ಮತ. ಇದು ಸೌಂದರ್ಯ ದೃಷ್ಟಿಯೂ ಹೌದು. ಎಂದರೆ ಆ ರೇಖೆ ಪ್ರಕೃತಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಕಲೆ ಅದನ್ನು ಸಾಧಿಸಬಹುದೆಂದೇ ಅದರ ಮಹಿಮೆ. ಎಲ್ಲ ಸೌಂದರ್ಯನುಭಾವಗಳಲ್ಲೂ ಈ ತೆರನಾದ ಸಂಧಿ ಅಥವಾ ವಿಗ್ರಹರೇಖೆ ಏರ್ಪಟ್ಟೂ ನಮ್ಮ ಲಿಪ್ತತೆ ದೂರವಾಗುವುದಕ್ಕೆ ಎಡ್ವರ್ಡ್ ಬುಲ್ಲೋ ಎಂಬಾತ ಸೈಕಿಕಲ್ ಡಿಸ್ಟೆನ್ಸ್‌ ಎಂದು ಕರೆದಿದ್ದಾನೆ. ಎಂದರೆ ಇಲ್ಲಿ ಆಗುವುದು ವಸ್ತುವಿನ ಅಥವಾ ಪ್ರಕೃತಿಯಿಂದ ದೂರೀಕರಣವಲ್ಲ. ಅದರ ದೃಷ್ಟಿಸತ್ಯದೊಂದಿಗೆ ದೂರೀಕರಣ ಮತ್ತು ಸಾರ್ವತ್ರಿಕವಾಗಿ ಸಾಮಾನ್ಯವಾದ ಅಂತಃ ಸತ್ಯದೊಂದಿಗೆ ನಮ್ಮ ಭಾವೈಕ್ಯ. ಈ ಅಂಶವನ್ನು ಥಿಯೋಡರ್ ಲಿಪ್ಸ್‌ ಎಂಬಾತ ಭಾವೈಕ್ಯತೆ ಎಂದು ಕರೆದಿದ್ದಾನೆ. ಒಂದೇ ಸೌಂದರ್ಯಾನುಭವದಲ್ಲೇ ಮಾನಸಿಕ ದೂರೀಕರಣ ಮತ್ತು ಭಾವೈಕ್ಯವಾಗುವ ಈ ತಂತ್ರ ಬಹು ಸೋಜಿಗದ್ದು. ಸೌಂದರ್ಯ ಮೀಮಾಂಸಕರು ಅಥವಾ ವಿಮರ್ಶಕರು ಈ ವಿರುದ್ಧ ತತ್ತ್ವಗಳು ಒಂದೇ ಅನುಭವದಲ್ಲಿ ಹೇಗೆ ಪರ್ಯವಸಾನವಾಗಬಲ್ಲವು ಎನ್ನುವುದನ್ನು ಎಂದರೆ ವಿರುದ್ಧವಾಗಿ ಕೆಲಸ ಮಾಡಿ ಹೇಗೆ ಒಂದೇ ಅನುಭವವನ್ನುಂಟುಮಾಡಬಲ್ಲವು ಎಂಬುದನ್ನು ವಿವರಿಸಿಲ್ಲ. ಆದರೆ ಅದರ ಸೂಕ್ಷ್ಮ ಇಲ್ಲಿದೆ. ನಮಗೂ ಪ್ರಕೃತಿಗೂ ಮಧ್ಯೆ ನಾವು ಎಳೆದುಕೊಂಡ ರೇಖೆ ಸಂಧಿರೇಖೆಯಾದರೆ ಅದು ಭಾವೈಕ್ಯತೆಯಲ್ಲೂ ಅದೇ ರೇಖೆ ವಿಗ್ರಹರೇಖೆಯಾದಲ್ಲಿ ದೂರೀಕರಣದಲ್ಲೂ ಮುಕ್ತಾಯಗೊಳ್ಳುತ್ತದೆ. 

ನಿರ್ಲಿಪ್ತತಾಸಾಧಕವಾದ ಚೌಕಟ್ಟನ್ನು ಒದಗಿಸುವಾತ ಕಲಾವಿದ. ಆತ ಸೃಷ್ಟಿಸಿದ ಪ್ರತಿಭಾನ್ವಿತ ಕೃತಿ ಸ್ವತಂತ್ರ ವಸ್ತುವಾಗಿ ಪ್ರಕೃತಿಯಿಂದ ಬೇರೆ ನಿಂತು, ಪ್ರಕೃತಿ ತೋರಿಸಿದರೂ ಸಾಮಾನ್ಯನಿಗೆ ಕಾಣದ ಚೈತನ್ಯವನ್ನು ಘನೀರೂಪಗೊಳಿಸಿ ಸುಲಭವಾಗಿ ಆತ ಆಸ್ವಾದಿಸುವಂತೆ ಮಾಡುತ್ತದೆ. ಎಂದರೆ ಆನಂದಾನುಭವಕ್ಕೆ ಅಗತ್ಯವಾಗುವ ಈ ಮಾನಸಿಕ ಬಾಹ್ಯತೆಯನ್ನು ಕಲಾಕೃತಿಯಲ್ಲಿ ಸಿದ್ಧರೂಪದಲ್ಲಿ ನಮಗೆ ಸಿಗುವಂತೆ ಮಾಡುವವನೇ ಕಲಾವಿದ. ಕಲಾವಿದನ ಕೃತಿ ಎನ್ನುವುದು ಅಶಿಕ್ಷಿತನಾದ ಸಾಮಾನ್ಯನಿಗೆ ಕಡಿದು, ಮೆರುಗುಕೊಟ್ಟು, ತಯಾರಿಸಿಟ್ಟ ವಜ್ರದಂತೆ. ಸಾಮಾನ್ಯನಿಗೆ ಕಾಣದ ಬಣ್ಣ, ರೇಖೆ, ಸಂಯೋಜನೆ ಕಲಾವಿದನ ದೃಷ್ಟಿಯ ಮೂಲಕ ಹಾದು ನಮಗೆ ಕೃತಿಯಾಗಿ ಬಂದಿರುತ್ತವೆ. ರವಿ ಕಾಣದ್ದನ್ನು ಕವಿ ಕಂಡಿದ್ದರೆ, ಅದರ ಅರಿವು ನಮಗಾಗುವುದು ಈ ಕೃತಿಗಳಿಂದ. ಜೀವನದಲ್ಲೂ ಕೃತಿಯಲ್ಲೂ ನಿರ್ಲಿಪ್ತತೆಯನ್ನು ಸಾಧಿಸಿದ ಕಲಾವಿದರು ಸಾಮಾನ್ಯರಿಗಿಂತ ಉತ್ಕೃಷ್ಟರೆಂಬ ವಿಷಯದಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. 

ಪ್ರಾಕೃತಿಕವಾದ ನಮ್ಮ ಜೀವನದಲ್ಲಿ ಸ್ವಾಭಾವಿಕವಾಗಿ ನಾವು ಪ್ರಕೃತಿಯೊಡನೆ ಬೇರೆಯಲ್ಲವೆಂಬಂತೆ ಅಭಿನ್ನ ಜೀವನವನ್ನು ಜರುಗಿಸುತ್ತಿದ್ದೇವೆ. ಆದ್ದರಿಂದಲೇ ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ಕಂಡು ಯಾವುದು ಉಪಯುಕ್ತ ಯಾವುದು ಭೌತಿಕವಾಗಿ ಸುಖಕರ ಎಂಬುದನ್ನೇ ಹುಡುಕುವ ನಾವು ಅವುಗಳಿಗೆ ಸಾಪೇಕ್ಷವಾದ, ಆದರೆ ನಮಗೆ ಅನಪೇಕ್ಷವಾದ ಕಷ್ಟ, ದುಃಖಗಳನ್ನು ಅನುಭವಿಸುತ್ತೇವೆ. ಇದೊಂದು ಸ್ವಾಭಾವಿಕ ಬಂಧನ, ಇದರಿಂದಲೇ ಪ್ರಕೃತಿಯಲ್ಲಿನ ಸೌಂದರ್ಯವನ್ನು ಆಸ್ವಾದಿಸಲು ಅನೇಕರಿಗೆ ಆಗಿದಿರುವುದು. ಕಲಾಕೃತಿ ವಿಶಿಷ್ಟವಾದ ರೀತಿಯಲ್ಲಿ ನಮ್ಮನ್ನು ವ್ಯಾವಹಾರಿಕ ತನ್ಮಯತೆ, ವ್ಯಾಹಾರಿಕ ಉಪಯುಕ್ತತೆ ಎನ್ನುವ ಕಾರ್ಪಣ್ಯಗಳಿಂದ ತಪ್ಪಿಸಿ ಭಾವಶುದ್ಧಿಯ ಮೂಲಕ ಪ್ರಕೃತಿ ನೀಡಬಹುದಾದ ಎಲ್ಲ ಅನುಭವಗಳನ್ನೂ ನೀಡುತ್ತದೆ; ಆದರೆ ಇಲ್ಲಿ ಆನುಭವ ಉದಾತ್ತವಾಗಿರುತ್ತದೆ ; ವ್ಯಕ್ತಿ-ಪರಿಮಿತಿಗಳಿಂದ ನಮ್ಮನ್ನು ಮುಕ್ತಿಗೊಳಿಸಿ ಸಾಧಾರಣ ಅಥವಾ ಸಾರ್ವತ್ರಿಕ ವೈಶಾಲ್ಯದ ಅನುಭವದಲ್ಲದು ಲೀನಗೊಳಿಸುತ್ತದೆ. ಎಂದರೆ ಸದ್ಯದಲ್ಲೇ ಪರನಿರ್ವೃತಿಯನ್ನು ಸಾಧಿಸಿ ಆತ್ಮ ಸಂವಾದದಲ್ಲಿ ತೊಡಗಿಸುವಂತೆ ಮಾಡುವ ಸಾಧನೆಯಾಗುತ್ತದೆ. ಕಲಾಕೃತಿ ಅವ್ಯಾವಹಾರಿಕ ಮತ್ತು ಅಲೌಕಿಕ ಎಂದರೆ ಇದೇ ಅರ್ಥ, ಭಾರತೀಯ ಸೌಂದರ್ಯಮೀಮಾಂಸಕನಾದ ಮಮ್ಮಟನ ದೃಷ್ಟಿಯಲ್ಲಿ ಕಲಾಕೃತಿ ಪ್ರಕೃತಿಗಿಂತ ಭಿನ್ನವಾದುದಕ್ಕೆ ಗುರುತು ಇದು ಃ ಕಲೆ ನಿಯತಿಕೃತ ನಿಯಮ ರಹಿತ, ಹ್ಲಾದೈಕಮಯ, ಅನನ್ಯ ಪರಿತಂತ್ರ, ನವರಸರುಚಿರ. ಈ ನಿಯತಿಕೃತ ನಿಯಮಗಳನ್ನು ಮೀರುವ ಶಕ್ತಿ ಮಾನವನ ಭಾವನೆಗೆ ಇಲ್ಲದಿದ್ದರೆ ಆತ ಕೇವಲ ಭೌತಿಕ ಅಥವಾ ವಾಸ್ತವಿಕ ಘಟಕವಾಗಿಯೇ ಇರುತ್ತಿದ್ದ. ಭಾವನೆಗೆ ಒಂದು ಸೃಷ್ಟಿಶಕ್ತಯಿದೆ ಎಂದು ತೋರಿಸಿಕೊಡುವುದೆಂದರೆ ಅದು ಕಲೆ. ಇತ್ತೀಚೆಗೆ ತಾರ್ಕಿಕ ನಿಯಮಗಳನ್ನೂ ಮೀರುವ ಸರ್ರಿಯಲಿಸಂ (ಅತಿವಾಸ್ತವಿಕತೆ) ಎನ್ನುವ ಶೈಲಿಗೆ ಸೇರಿದ ಕಲಾಕೃತಿಗಳು ಮಾನವನ ಭಾವನಾ ಸ್ವಾತಂತ್ರ್ಯವನ್ನೂ ನಿರ್ಮಾಣಶಕ್ತಿಯನ್ನೂ ಸೂಚಿಸುತ್ತವೆ. ಸುಪ್ತಚೇತನದ ಮಟ್ಟದಲ್ಲಿ ಅಡಗಿರುವ ಅನೇಕ ಗುಹ್ಯ ಅನುಭವಗಳನ್ನು ಅಭಿವ್ಯಕ್ತಿಗೊಳಿಸುವ ಈ ತೆರನಾದ ಅರ್ಥಕೃತಿಗಳು ಪ್ರಕೃತಿಯ ದೃಶ್ಯಗಳಲ್ಲಿ, ಸೃಷ್ಟಿಯಲ್ಲಿ ಕಾಣಬರುವುದಿಲ್ಲ. ಪ್ರಕೃತಿಯ ಸ್ವಾಭಾವಿಕ ಅಥವಾ ಭೌತಿಕ ನಿಯಮಾವಳಿಗಿಂತ ವಿಶಿಷ್ಟವಾದ ರೀತಿಯ ನಿಯಮಗಳಿಂದ ಸೃಷ್ಟಿ ಜರುಗಬಹುದೆಂದು ತೋರಿಸಿಕೊಡುವ ಧೀಮಂತ ನಿದರ್ಶನ ಕಲೆಯಲ್ಲಿ ಕಂಡುಬರುತ್ತದೆ. ಪ್ರಕೃತಿಯಿಂದ ಮೇಲೆದ್ದ, ಪ್ರಕೃತಿಗಿಂತ ಮಿಗಿಲಾದ, ಹೊಸತಾದ ಮಾನವ ಚೈತನ್ಯದ ಹೆಗ್ಗುರುತು ಕಲೆ. ನವೀನತೆಯ ಅಳತೆ ಮಾನವನಲ್ಲಿ ಸಿಗುತ್ತದೆ. ಇದೇ ಮಾನವ ಎನ್ನುವ ಪದದ ಅರ್ಥ. ಮಾ+ನವ ಸೃಷ್ಟಿಯಲ್ಲಿ ನವೀನತೆಯ ಮಾಪನವೇ ಮಾನವ. ಮಾನವತೆಯ ಅಭಿವ್ಯಕ್ತಿಕಲೆ. ಇಲ್ಲಿ ಮಾನವತನ್ನೊಡನೆಯೇ ಸಹಚಿಂತನೆ ಮಾಡಲೆಳೆಸುವ ಪ್ರಯತ್ನ ಕಾಣುತ್ತದೆ.

ಈ ಚೈತನ್ಯದ ಅಭಿವ್ಯಕ್ತಿ ವಾಸ್ತವಿಕ ಚಿತ್ರಕೃತಿಗಳಿಗಿಂತ ಅನುಕರಣಾತ್ಮಕ ಕೃತಿಗಳಿಗಿಂತ ಹೆಚ್ಚಿಗೆ ಸಂಜ್ಞಾತ್ಮಕ ಅಥವಾ ಭಾವಪ್ರಧಾನ ಚಿತ್ರಕೃತಿಗಳಲ್ಲಿ ಕಾಣಸಿಗುತ್ತದೆ. ಪ್ರಕೃತಿಯ ಗರ್ಭದಲ್ಲಿ ಅಡಗಿಕೊಂಡಿರುವ ಸರಳರೇಖೆಗಳನ್ನು ಮೂಲ ಆಧಾರಸ್ತಂಭ ಅಥವಾ ಅಸ್ಧಿಪಂಜರವನ್ನು ವಾಸ್ತವಿಕ ಹಾಗೂ ಅನುಕರಣಾತ್ಮಕ ಚಿತ್ರಗಳು ತೋರಿಸಲು ಅಸಮರ್ಥವಾದಾಗ ಸಂಜ್ಞಾತ್ಮಕ ಅಥವಾ ಸಾಂಕೇತಿಕ (ಸಿಂಬಾಲಿಕ್) ಮತ್ತು ಭಾವಪ್ರಧಾನ ಅಥವಾ ಅಭಿವ್ಯಕ್ತಿ ಪ್ರಧಾನ (ಎಕ್ಸ್‌ಪ್ರೆಷನಿಸ್ಟಿಕ್) ಕೃತಿಗಳು ಯಶಸ್ವಿಯಾಗುತ್ತವೆ. ಕಲೆ ಪ್ರಕೃತಿಯ ಪ್ರತಿಬಿಂಬವಾಗಿಯೇ ಉಳಿಯದೆ ಅದರ ವ್ಯಾಖ್ಯಾನವಾಗುವುದರಲ್ಲಿ ಮೌಲ್ಯವನ್ನು ನಾವು ಕಾಣಬಯಸುವುದಾದರೆ ಮಾನವ ಜೀವನದಲ್ಲಿ ಪ್ರಕೃತಿಗೆ ಇದ್ದಂತೆಯೇ ಕಲೆಗೂ ಸ್ಥಾನವಿರುವುದನ್ನೂ ಒಪ್ಪಬೇಕಾಗುತ್ತದೆ. ಅಷ್ಟೇಅಲ್ಲದೆ, ಅನೇಕ ಸಲ ಪ್ರಕೃತಿಯನ್ನೇ ಮೀರಿಸಿ ನಮ್ಮ ಸಂಸ್ಕೃತಿ ಅಥವಾ ಬೆಳೆವಣಿಗೆಯನ್ನು ತೋರಿಸುವ ಮಾಪಕ ಈ ಕಲೆ. ಮಾನವನ ಅಂತರ್ಗತ ಶಕ್ತಿಯ ವೈಫಲ್ಯವೇ ಕಲೆಯಾಗಿ ಕಾಣುತ್ತದೆಂದು ಭಾವಿಸುವುದಾದರೆ ಕಲೆಯ ಅರ್ಥ ನಮಗಾದಂತೆಯೇ.   	(ಕೆ.ಬಿ.ಆರ್.)

ಕಲೆ ಮತ್ತು ಸತ್ಯ
ಕಲೆ ಭಾವನಾಕ್ಷೇತ್ರಕ್ಕೆ ಸೇರಿದ ವಸ್ತು. ಭಾವನೆಗಳ ಅಭಿವ್ಯಕ್ತಿ ಕಲೆಯ ನಾನಾರೂಪಗಳಲ್ಲಿ ಪ್ರಕಟಗೊಳ್ಳುತ್ತದೆ-ಕವನ, ಗಾನ, ನೃತ್ಯ, ಚಿತ್ರ-ಹೀಗೆ. ಎಂದ ಮೇಲೆ ತರ್ಕದ ಕ್ಷೇತ್ರಕ್ಕೆ ಸೇರಿದ ಸತ್ಯ ಎನ್ನುವುದರೊಂದಿಗೆ ಕಲೆಯ ಸಂಬಂಧವೇನು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ತಜ್ಞರಲ್ಲಿ ಈ ವಿಚಾರವಾಗಿ ಭಿನ್ನಾಭಿಪ್ರಾಯಗಳಿವೆ. ಹಲವರು ತರ್ಕಸತ್ಯವನ್ನು ಪ್ರತಿಪಾದಿಸುವಂತೆಯೇ ಕಲೆಯೂ ಸತ್ಯದ ನಿರೂಪಣೆಗೆ ಒಳ್ಳೆಯ ಮಾಧ್ಯಮವೆನ್ನುತ್ತಾರೆ. ಮತ್ತಿತರರು ತರ್ಕದ ಸತ್ಯಕ್ಕೂ ಕಲೆ ನಿರೂಪಿಸುವ ಸತ್ಯಕ್ಕೂ ಸ್ವಭಾವತಃ ವ್ಯತ್ಯಾಸವಿದೆ ಎನ್ನುತ್ತಾರೆ. ಕಲೆ ಸತ್ಯವನ್ನು ನಿರೂಪಿಸಬಹುದು. ಆದರೆ ಆ ಸತ್ಯ ತರ್ಕಾತೀತವಾದದ್ದು ಅಥವಾ ಬುದ್ಧ್ಯಾರೂಢವಾದದ್ದು ಎನ್ನುತ್ತಾರೆ. ಹೀಗೆ ಕಲೆ ಮತ್ತು ಸತ್ಯದ ಸಂಬಂಧದ ವಿವೇಚನೆಯಲ್ಲಿ ಬಹುಮುಖ ಉತ್ತರಗಳು ಸಿಗುತ್ತವೆ.

ಒಂದು ಮಾತ್ರ ಖಚಿತ. ತರ್ಕ ಹುಡುಕುವ ವಿಚಾರಗಳ ಅನ್ಯೋನ್ಯ ಸಾಂಗತ್ಯ (ಕನ್ಸಿಸ್ಟೆನ್ಸಿ), ವಿಚಾರಗಳಿಗೂ ಬಾಹ್ಯವಸ್ತುಗಳಿಗೂ ಇರುವ ಹೊಂದಿಕೆ (ಕರೆಸ್ಪಾಂಡೆನ್ಸ್‌) ಕಲಾಕ್ಷೇತ್ರದಲ್ಲಿ ಅನ್ವಯವಾಗುವುದಿಲ್ಲ. ಈ ಎರಡನೆಯದನ್ನು ಸಾಧಿಸಲು ಹೊರಟ ಕಲೆ ಅನುಕರಣಾತ್ಮಕ ಮತ್ತು ವಾಸ್ತವಿಕ (ಇಮಿಟೆಟಿವ್, ರಿಯಲಿಸ್ಟಿಕ್) ಎನಿಸಿ ತನ್ನ ಮೌಲಿಕ ನಿಲವನ್ನೇ ಕಳೆದುಕೊಳ್ಳುತ್ತದೆ. ಛಾಯಾಗ್ರಹಣವೇ ಕಲೆಯ ಉದ್ದೇಶವಾದಲ್ಲಿ ಅದನ್ನು ಕ್ಯಾಮರಾ ಮತ್ತು ಟೇಪ್ ರಿಕಾರ್ಡರ್ ಕಲೆಗಿಂತ ಯಶಸ್ವಿಯಾಗಿ ಸಾಧಿಸಬಲ್ಲವು. ಆದರೆ ಕಲೆ ಸಾಧಿಸುವ ಸತ್ಯ ಎಂಥದು? ಚಿತ್ರಕಲೆಗಿಂತ ವಿಶಿಷ್ಟವಾಗಿ ಸಾಹಿತ್ಯ, ನೃತ್ಯ, ಸಂಗೀತಗಳು ಈ ವಿಚಾರದಲ್ಲಿ ಬೆಳಕನ್ನು ನೀಡಲು ಸಮರ್ಥವಾಗಿವೆಯೆನ್ನಬಹುದು. ಪದಗಳು, ಭಂಗಿಗಳು, ನಾದಗಳು ಪ್ರಕೃತಿಯಲ್ಲಿ ಯಥಾರೂಪದಲ್ಲಿ ಇರುವುದಿಲ್ಲ. ನಾವು ಬಳಸುವ ಪದ ಭೌತಿಕವಾಗಿ ಶಬ್ದವಾಗಿದ್ದರೂ ಸ್ವರಯುಕ್ತವಾಗಿದ್ದರೂ ಮಾನವನಲ್ಲಿ ವಿಶೇಷ ರೀತಿಯಿಂದ ಸಂಯೋಜನೆಗೊಳ್ಳುತ್ತದೆ; ಅರ್ಥಗಳಿಸುತ್ತದೆ. ಈ ಸಂಯೋಜನೆ ಮತ್ತು ಅರ್ಥಗಳು ಮಾನವನ ಸೃಷ್ಟಿ. ಈ ಅರ್ಥ ನೇರವಾಗಿರಬಹುದು, ವ್ಯಂಗ್ಯವಾಗಿರಬಹುದು. ಆದರೆ ಮನಸ್ಸಿನ ಮೇಲೆ ಪರಿಣಾಮ ಬೀರುವಲ್ಲಿ ಇದು ವಿಶಿಷ್ಟಶಕ್ತಿಯನ್ನು ಪಡೆದಿರುತ್ತದೆ. ಅರ್ಥ ಬುದ್ಧಿಗ್ರಾಹ್ಯವಾದಂತೆಯೇ ಭಾವನಾಗ್ರಾಹ್ಯವೂ ಆಗುತ್ತದೆ; ತರ್ಕದ ವಾದಸರಣಿ ಮತ್ತು ಸಿದ್ಧಾಂತ ಬುದ್ಧಿಗೆ ಸಂಗತವಾಗಿ ಕಾಣಲ್ಪಟ್ಟು ಆ ಅನುಭವದಲ್ಲೇ ಪರಿಸಮಾಪ್ತಗೊಳ್ಳುತ್ತದೆ; ಕೆಲವೊಮ್ಮೆ ತರ್ಕಾತೀತವಾದ ಆನಂದಾನುಭವದಲ್ಲೂ ನಮ್ಮನ್ನು ಮುಳುಗಿಸಬಹುದು. ಉದಾಹರಣೆಗೆ ಸೊನ್ನೆಯಲ್ಲಿ ಸೊನ್ನೆಯನ್ನು ತೆಗೆದರೆ ಉಳಿದದ್ದು ಸೊನ್ನೆ ಎಂದರೆ ಗಣಿತದಲ್ಲಿ ಸಮಂಜಸವೆನಿಸಿ ಬೌದ್ಧಿಕವಾಗಿ ನಮಗೆ ತೃಪ್ತಿ ದೊರಕುತ್ತದೆ. ಆದರೆ ಸೊನ್ನೆ ಎನ್ನುವ ಪದ ಪೂರ್ಣ, ಪರಿಪೂರ್ಣ ಎಂಬರ್ಥದಲ್ಲಿ ಸ್ಫೋಟಗೊಂಡಲ್ಲಿ (ಈಶಾವಾಸ್ಯ ಉಪನಿಷತ್ತಿನ ಶಾಂತಿಮಂತ್ರದ ಹಾಗೆ) ಯಾವುದೋ ಅಲೌಕಿಕದರ್ಶನ ನಮಗಾದಂತೆ ಅನಿಸಿ ಆನಂದವಾಗುತ್ತದೆ. ಐ.ಎ.ರಿಚಡ್ರ್ಸ್‌ ಎನ್ನುವ ವಿಮರ್ಶಕ ಭಾಷೆಗೆ ಸಾಂಕೇತಿಕ (ಸಿಂಬಾಲಿಕ್) ಮತ್ತು ಭಾವ ಪ್ರಚೋದಕ (ಇಮೋಟಿವ್) ಕಾರ್ಯಲಕ್ಷಣಗಳಿವೆ ಎನ್ನುತ್ತಾನೆ. ಕಲೆಗೆ ಹೆಚ್ಚಾಗಿ ಸಂಬಂಧಿಸಿದ್ದು ಎರಡನೆಯದು. ಕವಿತೆ ಪದಗಳಿಂದ ಕೂಡಿದ್ದರೂ ನಮ್ಮನ್ನು ಭಾವನೆಯಲ್ಲಿ ಮುಳುಗಿಸುವುದು ಭಾವಮೂಲವಾದ ಅದರ ಭಾಷೆಯಿಂದ. ನಮ್ಮ ಸಮಗ್ರ ವ್ಯಕ್ತಿತ್ವದ ಮೇಲೆ ಅದು ತೀವ್ರ ಪರಿಣಾಮವನ್ನುಂಟುಮಾಡುತ್ತದೆ. ಅನುಭವವೆಂಬ ಬಹು ವಿಶಾಲ ನಕ್ಷೆಯಲ್ಲಿ ಒಂದು ಪದ ಅಥವಾ ವಾಕ್ಯ ಲೆಕ್ಕಕ್ರಮದಿಂದ ನಮ್ಮಿಂದ ಗುಣಿಸಲು ಸಾಧ್ಯವಾಗದ ರೀತಿಯಲ್ಲಿ ವಿಶಿಷ್ಟ ಸತ್ಯವನ್ನು ತೋರಿಸಿತು ಎಂದು ಭಾವಾವಿಷ್ಟರಾಗಿ ಹೇಳುತ್ತೇವೆ. ಹಾಗೆಯೇ ನೃತ್ಯದ ಭಂಗಿಗಳು. ಅವು ಪ್ರಕೃತಿಯಲ್ಲಿ ಯಥಾರೂಪದಲ್ಲಿರದ ವಿನ್ಯಾಸಗಳು. ನಾದಮಯವಾದ ಸಂಗೀತವೂ ಹಾಗೆಯೇ. ಆದರೆ ಚಿತ್ರದ ಒಂದು ವಿಚಾರವಾಗಿ ಈ ಸೂತ್ರವನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಚಿತ್ರ ಬಹು ಬೇಗ, ಬಹು ಸುಲಭವಾಗಿ ಪ್ರಕೃತಿಯ ಪ್ರತಿಕೃತಿಯಾಗಬಹುದು. ಬಣ್ಣಕ್ಕೆ ಬಣ್ಣ, ಬೆಳಕಿಗೆ ಬೆಳಕು, ಕತ್ತಲೆಗೆ ಕತ್ತಲು ಪ್ರತಿಕೃತಿಯಾಗಬಹುದು. ಎರಡು ಮತ್ತು ಎರಡು ಸೇರಿ ನಾಲ್ಕು ಆಗುವಂತೆಯೇ ಪ್ರಕೃತಿಯನ್ನು ಚಿತ್ರ ಪ್ರತಿಬಿಂಬಿಸಬಹುದು. ಇದು ತಾರ್ಕಿಕವಾದ ಸಾಂಗತ್ಯ. ಕಲೆಯ ಮೌಲ್ಯ ಅಂಥ ಕೃತಿಗಳಲ್ಲಿರುವುದಿಲ್ಲ. ಸಾಹಿತ್ಯದಲ್ಲಿ ವಾಸ್ತವಿಕವಿವರಣೆ ನಮಗೆ ಹಿತವೆನಿಸದ ಹಾಗೆಯೇ ಚಿತ್ರ ವಾಸ್ತವೀಕರಣದಿಂದ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಕಲಾವಿದನಾದವ ಚಿತ್ರದ ಚೌಕಟ್ಟಿನಲ್ಲಿ ಸಾಧಿಸುವುದು ೨+೨=೪ ಅಲ್ಲ. ಆತ ತನ್ನ ವಸ್ತುವಿನ್ಯಾಸದಲ್ಲಿ ಅನೇಕ ಕಡೆ ಕತ್ತರಿಯನ್ನು ಉಪಯೋಗಿಸುತ್ತಾನೆ. ಕಲಾರಚನೆ (ಕಾಂಪೊಸಿóಷನ್), ರೂಪ (ಫಾರಂ), ಆಲೇಖ್ಯ (ಡಿಸೈನ್), ಸಮತೂಕ (ಬ್ಯಾಲೆನ್ಸ್‌)- ಇವು ವಾಸ್ತವಿಕದೃಷ್ಟಿಯಿಂದ ಭಿನ್ನವಾಗಿದ್ದರೆ ಕುತೂಹಲವನ್ನಷ್ಟೇ ಹುಟ್ಟಿಸದೆ ನಮ್ಮನ್ನು ನೂತನ ಅನುಭವದಲ್ಲೂ ತೊಡಗಿಸಬಹುದು. ಉದಾಹರಣೆಗೆ ಸಲ್ವಿಡಾರ್ ಡಾಲಿ ರಚಿಸಿರುವ ಪರ್ಸಿಸ್ಟೆನ್ಸ್‌ ಆಫ್ ಮೆಮೊರಿ ಎನ್ನುವ ಚಿತ್ರ. ಬರೀ ಕಣ್ಣಿಗೆ ಹಿತವಾಗುವುದೊಂದೇ ಅಲ್ಲದೆ ಸಾಂಕೇತಿಕ ಅರ್ಥವನ್ನು ಹೊಂದಿದ್ದು ನಮ್ಮ ಭಾವನೆ ಅಥವಾ ಅಂತರಂಗವನ್ನು ಇದು ಮಿಡಿಯುತ್ತದೆ. ಚೆನ್ನಾಗಿ ಪರಿಭಾವಿಸುವವರಿಗೆ ಇದರ ಅವಲೋಕನದಿಂದ ಕರುಳು ಕಿವುಚಿದಂತಾದೀತು, ಕತ್ತು ತುಂಬಿ ಬಂದೀತು. ಇನ್ನೂ ತೀವ್ರ ಸಂವೇದನೆಯುಳ್ಳವರಲ್ಲಿ ಇದು ಸುಪ್ತ ಚೇತನದೊಂದಿಗೆ ಸಂಪರ್ಕ ಬೆಳೆಸಿ ಆನಂದಾನುಭೂತಿಯನ್ನುಂಟು ಮಾಡಬಹುದು.

ಅಭಿವ್ಯಕ್ತಿ ಪಂಥ (ಎಕ್ಸ್‌ಪ್ರೆಷನಿಸಂ), ಘನಾಕೃತಿ ವಿಧಾನ (ಕ್ಯೂಬಿಸಂ), ಸ್ವೇಚ್ಛಾ ಸಂಕೇತವಾದ (ಫ್ಯೂಚರಿಸಂ), ಅತಿವಾಸ್ತವಿಕ ವಿಧಾನ (ಸರ್ರಿಯಲಿಸಂ) ಮುಂತಾದ ಆಧುನಿಕ ಕಲಾವಿಧಾನಗಳಲ್ಲಿ ಬಣ್ಣ, ರೇಖೆ, ಸಂಯೋಜನೆಗಳು ಹೊಸ ಹೊಸರೀತಿಯಲ್ಲಿ ಬೆಳೆಯುತ್ತ ಬಂದಿರುವಾಗ ಅನೇಕ ಕೃತಿಗಳು ಪ್ರಥಮ ಬಾರಿಗೆ ನಮಗೆ ಯಾವ ಅರ್ಥವನ್ನೂ ನೀಡದೆ ಇರುವಂತೆ ಕಾಣಬಹುದು. ಅನೇಕವು ಕೇವಲ ವಿಕಾರಗಳೆಂದೇ ಅನಿಸಬಹುದು. ಹೀಗಿರುವಲ್ಲಿ ಕಲೆಯಲ್ಲಿ ನಾವು ನಿರೀಕ್ಷಿಸುವ ಸತ್ಯ ಎಂಥದು? ಕಣ್ಣಿಗೆ ಹಿತ ಎನಿಸುವುದೇ? ಲಾಲಸೆಯನ್ನುಂಟುಮಾಡುವುದೇ? ಮನಸ್ಸನ್ನು ವಿಕ್ಷುಬ್ಧಗೊಳಿಸುವುದೇ? ಇದೆಲ್ಲವೂ ಅಲ್ಲದೆ ಹೋಗಬಹುದು. ಸಾಮಾನ್ಯವಾಗಿ ಸಾರ್ವತ್ರಿಕವಾಗಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂಥದೇ? ಹೀಗಾದಲ್ಲಿ ಸಾರ್ವಜನಿಕರು ಮತ (ಓಟು) ನೀಡಿ ನಿರ್ಧರಿಸುವಂಥ ಸಾರ್ವತ್ರಿಕ ಅರ್ಥವನ್ನು ಹೊಂದಿ ಗೆಲ್ಲುವ ಚಿತ್ರ ಸತ್ಯವನ್ನು ಸಾರುವಂಥದಲ್ಲ. ಕಲೆಯ ಆಸ್ವಾದನೆ ಸ್ವಾಭಾವಿಕವಾದರೂ ನಿಜವಾದ ಅಭಿರುಚಿ ಹುಟ್ಟಬೇಕಾದರೆ ಶಿಕ್ಷಣದ ಅಗತ್ಯ ಇದ್ದೇ ಇರುತ್ತದೆ. ಮೌಲ್ಯ ನಿರ್ಧಾರಕ್ಕೂ ಶಿಕ್ಷಣ ಬೇಕೇ ಬೇಕು. ಈ ದೃಷ್ಟಿಯಿಂದ ಸುಲಭ ಕಲೆ ಮತ್ತು ಕಷ್ಟಕರ ಕಲೆ ಎನ್ನುವ ಎರಡು ರೀತಿಯ ಕಲೆಗಳೂ ಇವೆ. ಮೊದಲನೆಯದು ಸ್ವಾಭಾವಿಕವಾದ ಪ್ರತಿಕ್ರಿಯೆಯನ್ನು ಗಳಿಸುವಂತೆಯೇ ಎರಡನೆಯದೂ ಶಿಕ್ಷಣ ಪಡೆದಾತನ, ಅಭಿರುಚಿ ಇರುವವನ, ಹೃದಯ ಸಂಸ್ಕಾರವಿರುವವನ ಸ್ವಾಭಾವಿಕ ಪ್ರತಿಕ್ರಿಯೆಯನ್ನು ಗಳಿಸುತ್ತದೆ. ಎರಡರಲ್ಲೂ ಪ್ರತಿಕ್ರಿಯೆ ಅಥವಾ ಅನುಭವದ ಮೂಲ ವ್ಯಕ್ತಿಯ ಸಮಗ್ರ ಜೀವನದ ಸಂಸ್ಕಾರವನ್ನು ಹೊಂದಿ ಕೊಂಡಿರುತ್ತದೆ. ಕಲೆಯಲ್ಲಿ ನಿತ್ಯಸತ್ಯವನ್ನು ಕಾಣುವ ಹಂಬಲವುಳ್ಳವರೂ ಇರುತ್ತಾರೆ. ಆದರೆ ನಿರೀಕ್ಷಿಸಬೇಕಾದ ಈ ಸತ್ಯ ಯಾವುದು? ಎಲ್ಲ ಪ್ರೇಕ್ಷಕರ ದೃಷ್ಟಿಯಿಂದಲೂ ಸಮಾನ ಅಥವಾ ಸಾಮಾನ್ಯವಾದುದೇ? ರೂಪದಲ್ಲೂ ರುಚಿಯಲ್ಲೂ ವೈವಿಧ್ಯವಿಲ್ಲದಿರುವುದೇ? ಜೀವನದ ಅನುಭವ ಬದಲಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಜಡ್ಡುಹಿಡಿದ ಯಾವುದೋ ಒಂದೇ ಮುಖ ಒಂದೇ ರಚನೆ ಒಂದೇ ಗೀತೆ ಹಾಡುತ್ತಿರುವುದೇ? ಇಂಥದನ್ನೆಲ್ಲ ಪಡಿಯಚ್ಚು ಮಾದರಿಯದು (ಸ್ಟೀರಿಯೊಟೈಪ್) ಎಂದು ಕರೆಯಬಹುದು. ಇಂಥ ಕಲೆಯಲ್ಲಿ ಯಾವ ನಿತ್ಯ ಚೈತನ್ಯವೂ ಇರುವುದಿಲ್ಲ. ಈ ನಿತ್ಯತೆಯನ್ನು ಕಾಣಬೇಕಾದರೆ ಕಲಾ-ಚೈತನ್ಯ, ಅನುಭವ ಹೆಚ್ಚಿದಂತೆಲ್ಲ ಚಿರನೂತನವಾಗಿ ವಿವಿಧ ರೂಪಗಳಲ್ಲಿ, ರಚನೆಯಲ್ಲಿ, ತನಗೆ ತಾನೇ ರೂಪಿಸಿಕೊಳ್ಳುವುದರಲ್ಲೂ ನೂತನ ಪ್ರಭಾವಗಳನ್ನು ಬೀರುವುದರಲ್ಲೂ ಕಾಣಬೇಕಾಗುತ್ತದೆ. ಭೌತಿಕ ಅಥವಾ ದೈಹಿಕವಾಗಿ ಪ್ರಾಣ ಚೈತನ್ಯ ಹೇಗೆ ಜೀವನವನ್ನು ಮುಂದುವರಿಸುತ್ತದೊ ಹಾಗೆಯೇ ಕಲೆಯಲ್ಲಿನ ಈ ಸೃಷ್ಟಿ ಚೈತನ್ಯ ಜೇವನ ಸಂಸ್ಕೃತಿಯನ್ನೂ ಮುಂದುವರಿಸುತ್ತದೆ. ಅಂಥದರಲ್ಲಿ ನಾವು ನಿತ್ಯ-ಸತ್ಯವನ್ನು ಅಪೇಕ್ಷಿಸಬೇಕು.	(ಕೆ.ಬಿ.ಆರ್.)

ಕಲೆ ಮತ್ತು ಸಮಾಜ
ಮಾನವ ಸಮಾಜಜೀವಿ. ಅವನ ಹುಟ್ಟಿಗೆ ತಂದೆತಾಯಿ ಕಾರಣರು. ಅವನು ಬೆಳೆಯುವುದು ಒಂದು ಬಳಗದ ಮಧ್ಯೆ. ಆತ ಬಾಳುವ ಸಾಮಾಜಿಕ ಸನ್ನಿವೇಶ ಒಂದು ಕುಟುಂಬದಂತೆ ಸಣ್ಣ ಸಂಸ್ಥೆಯಾಗಿರಬಹುದು. ಒಂದು ರಾಷ್ಟ್ರದಂತೆ ದೊಡ್ಡ ಸಂಸ್ಥೆಯಾಗಿರಬಹುದು. ಸಣ್ಣದಾಗಲಿ ದೊಡ್ಡದಾಗಲಿ ಆ ಸಾಮಾಜಿಕ ಸನ್ನಿವೇಶವನ್ನು ಬಿಟ್ಟು ಅದರ ಹೊರಗೆ ಬಾಳಲು ಪ್ರಯತ್ನಿಸಿದರೆ ಅವನ ಜೀವನ ಕುಂಠಿತವಾಗುತ್ತದೆ. ಹುಟ್ಟಿದ ಒಂದು ಮಗುವನ್ನು ಅಡವಿಯಲ್ಲಿ ಬಿಟ್ಟರೆ ಅದು ಮೃಗಗಳ ಮಧ್ಯೆ ಬೆಳೆಯುವುದರಿಂದ ಅದರಲ್ಲಿ ಮಾನವ ವ್ಯಕ್ತಿತ್ವ ಬೆಳೆಯುವುದಿಲ್ಲ; ಮಾನವನ ವ್ಯಕ್ತಿತ್ವಕ್ಕೆ ವಿಶಿಷ್ಟವಾದ ಸಂಸ್ಕೃತಿ ಬೆಳೆಯುವುದು ತಂದೆ ತಾಯಿ ಸೋದರರು ಸಂಗಡಿಗರು ಮತ್ತು ಉಪಾಧ್ಯಾಯರ ಸಹಕಾರದಿಂದ; ಮತ್ತು ಭಾವನೆಗಳು ಬೆಳೆಯುವುದು ಒಂದು ದೇವಾಲಯ, ಒಂದು ಚರ್ಚ್ ಅಥವಾ ಮಸೀದಿಯ ಮೂಲಕ; ಹಕ್ಕು ಬಾಧ್ಯತೆಗಳ ತಿಳಿವು ಬೆಳೆದಿರುವುದು ಒಂದು ರಾಷ್ಟ್ರ ವ್ಯವಸ್ಥೆಯ ಮೂಲಕ.

ಧರ್ಮ, ವಿಜ್ಞಾನ, ಕಲೆ
ಮಾನವನ ಸಂಸ್ಕೃತಿಯಲ್ಲಿ ಮುಖ್ಯವಾದವು ಮೂರು : ಧರ್ಮ, ವಿಜ್ಞಾನ ಮತ್ತು ಕಲೆ. ಇವು ಯಾವಾಗ ಮಾನವನಲ್ಲಿ ಹುಟ್ಟಿದುವೆಂದು ಹೇಳಲು ಸಾಧ್ಯವಿಲ್ಲ. ಪ್ರ.ಶ.ಪೂ.  ೨೦೦೦೦ಕ್ಕೆ ಆಗಲೇ ಅವನು ಕೆತ್ತಿದ ಅಥವಾ ಕೊರೆದ ಚಿತ್ರಗಳು ಗುಹೆಗಳಲ್ಲಿ ದೊರೆಯುತ್ತವೆ. ಅದಕ್ಕಿಂತಲೂ ಹಿಂದಿನ ಕಾಲದಲ್ಲಿ ಅವನು ಉಪಯೋಗಿಸಿದ ಕಲ್ಲಿನ ಆಯುಧಗಳ ಮತ್ತು ಮಣ್ಣಿನ ಮಡಕೆಗಳ ಅವಶೇಷಗಳು ದೊರೆತಿವೆ. ಮೊಟ್ಟಮೊದಲಿಗೆ ಬೆಂಕಿಯನ್ನು ಮಾಡುವ ರಹಸ್ಯವನ್ನು ಕಲಿತ ಮಾನವ ಒಬ್ಬ ದೊಡ್ಡ ವಿಜ್ಞಾನಿ. ತನಗೆ ಮಂಗಳವನ್ನುಂಟುಮಾಡುವ ಅಥವಾ ಕೆಡುಕನ್ನುಂಟುಮಾಡುವ ಶಕ್ತಿಗಳನ್ನು ಭಾವಿಸಿ ಅವುಗಳನ್ನು ಒಲಿಸಿಕೊಳ್ಳಲು ಸಣ್ಣಪುಟ್ಟ ಸಂಸ್ಕಾರಗಳನ್ನು ರಚಿಸಿದವನಲ್ಲಿ ಮತಭಾವನೆ ಇದೆ. ಕಲೆ, ವಿಜ್ಞಾನ, ಮತ ಇವು ಈಚಿನ ಕಾಲದಲ್ಲಿರುವಂತೆ ಹಿಂದಿನ ಕಾಲದಲ್ಲಿ ಬೇರೆ ಬೇರೆಯಾಗಿರದೆ ಒಂದರೊಡನೆ ಒಂದು ಹೆಣೆದುಕೊಂಡಿದ್ದವು. ಬೆಂಕಿಯನ್ನು ಮಾಡುವುದು ಒಂದು ಅಪ್ಪಟ ವೈಜ್ಞಾನಿಕ ಪ್ರಯೋಗವಾಗಿರಲಿಲ್ಲ. ಅದು ಧರ್ಮಭಾವನೆಯೊಡನೆ ಬೆರೆತಿತ್ತು. ಕೆಲವು ಕಾಡುಜನ ಬೆಂಕಿಯನ್ನು ಮಾಡುವ ಸಲಕರಣೆಗೆ ಒಂದು ಸುಂದರ ರೂಪವನ್ನು ಕೊಟ್ಟಿರುತ್ತಾರೆ. ಪ್ರಾಕ್ತನರ ಹಾಡುಗಳು, ಕುಣಿತ ಮುಂತಾದವು ಅವರ ಮತ ಸಂಸ್ಕಾರಗಳ ಅಂಗಗಳಾಗಿದ್ದುವು. ಆ ಜನರಲ್ಲಿ ಲಲಿತಕಲೆ ಮತ್ತು ಉಪಯುಕ್ತ ಕಲೆ ಎಂಬ ಭೇದ ಕಾಣಿಸುವುದಿಲ್ಲ. ಕಲೆಗಾಗಿ ಕಲೆ ಎಂಬ ಭಾವನೆ ಮೇಲ್ಮಟ್ಟದ ಸಂಸ್ಕೃತಿಯನ್ನು ಮುಟ್ಟಿದ ಪ್ರಾಚೀನ ಗ್ರೀಕರಲ್ಲೂ ಭಾರತೀಯರಲ್ಲೂ ಇದ್ದಂತೆ ತೋರುವುದಿಲ್ಲ. ಗ್ರೀಕರಲ್ಲಿ ನಾಟಕ ಹುಟ್ಟಿ ಬೆಳೆದದ್ದು ಧರ್ಮಸಂಸ್ಕಾರಗಳ ಸಂದರ್ಭಗಳಲ್ಲಿ. ಅವರ ವಾಸ್ತುಶಿಲ್ಪ ಮತ್ತು ವಿಗ್ರಹಗಳ ಶಿಲ್ಪ ಅವರ ಮತಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಪ್ರಾಚೀನ ಭಾರತದಲ್ಲೂ ಗಾನ, ಶಿಲ್ಪ, ನೃತ್ಯ ಮುಂತಾದವು ಅದರ ನಿವಾಸಿಗಳ ಮತಭಾವನೆಗಳಿಗೆ ಪೋಷಕವಾಗಿ ಹುಟ್ಟಿ ಬೆಳೆದುವು. ಈ ಜನಾಂಗಗಳ ಕಾವ್ಯ ನಾಟಕಗಳ ಉದ್ದೇಶ ಇತ್ತೀಚಿನವರೆಗೆ ಮತಭಾವನೆಯನ್ನೂ ನೀತಿ ಧರ್ಮಗಳನ್ನೂ ಪುಷ್ಟಿಗೊಳಿಸುವುದಾಗಿತ್ತು. ಯುರೋಪಿನ ಇತಿಹಾಸದ ಮಧ್ಯಯುಗದಲ್ಲಿ ಕಲೆ ಧರ್ಮದ ಅಧೀನಕ್ಕೆ ಒಳಪಟ್ಟಿತ್ತು. ಕಲೆಗಾಗಿ ಕಲೆ ಎಂಬುದು ಯುರೋಪಿನಲ್ಲಿ ತುಂಬ ಈಚೆಗೆ ಹುಟ್ಟಿದ ಭಾವನೆ. ಕಲೆಗಾಗಿ ಕಲೆ ಎಂಬ ವಾದಕ್ಕೆ ಸೋವಿಯತ್ ಸಮಾಜವಾದಿ ಗಣರಾಜ್ಯದಲ್ಲಿ ಪುರಸ್ಕಾರವಿಲ್ಲ. ಸೋವಿಯತ್ ದೇಶದಲ್ಲಿ ಕಲೆ ಧರ್ಮದ ದಾಸ್ಯದಿಂದ ಬಿಡುಗಡೆ ಹೊಂದಿತಾದರೂ ರಾಜಕೀಯದಿಂದ ಬಿಡುಗಡೆ ಹೊಂದಿಲ್ಲವೆಂದು ಒಂದು ವಾದವಿದೆ. ಸಮಾಜದ ಉತ್ಕರ್ಷಕ್ಕೆ ಸಾಹಿತ್ಯ ನೆರವಾಗಬೇಕೆಂಬುದು ಅಲ್ಲಿಯ ಭಾವನೆ.

ಸಮಾಜಕ್ಕೂ ಕಲೆ, ವಿಜ್ಞಾನ ಮತ್ತು ಧರ್ಮಗಳಿಗೂ ಇರುವ ಸಂಬಂಧದ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಿವೆ. ಈ ಅಭಿಪ್ರಾಯಗಳಿಗೆ ಸಂವಾದಿಯಾಗಿ ಸಮಾಜಶಾಸ್ತ್ರದಲ್ಲೂ ಇವುಗಳ ವಿಚಾರವಾಗಿ ಅನೇಕ ಸಮಸ್ಯೆಗಳು ಹುಟ್ಟಿವೆ. ಇಂದಿನ ಕಲೆಗಾರರೂ ವಿಜ್ಞಾನಿಗಳೂ ಕಲೆ ಮತ್ತು ವಿಜ್ಞಾನಗಳ ವೈಶಿಷ್ಟ್ಯವನ್ನೂ ಸ್ವಾತಂತ್ರ್ಯವನ್ನೂ ಎತ್ತಿಹಿಡಿಯುವ ಉದ್ದೇಶದಿಂದ ಕಲೆಗಾಗಿ ಕಲೆ, ವಿಜ್ಞಾನಕ್ಕಾಗಿ ವಿಜ್ಞಾನ ಎಂಬ ತತ್ತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಕಲೆಗೆ ಮತ್ತು ವಿಜ್ಞಾನಕ್ಕೆ ವಿಶಿಷ್ಟವಾದ ಸ್ವಭಾವಗಳಿವೆ. ಒಂದೊಂದೂ ತಮ್ಮವೇ ಆದ ವಿಶೇಷ ದೃಷ್ಟಿಗಳನ್ನೂ ತದನುಗುಣವಾದ ವಿಧಾನಗಳನ್ನೂ ಪಡೆದಿರುತ್ತವಾದ್ದರಿಂದ ಆ ವೈಶಿಷ್ಟ್ಯವನ್ನು ಬೆಳೆಸಲು ಕಲೆಗಾರರಿಗೆ ಮತ್ತು ವಿಜ್ಞಾನಿಗಳಿಗೆ ಸ್ವಾತಂತ್ರ್ಯವಿರಬೇಕೆಂದು ಇವರ ವಾದ.

ಮಾನವನ ಹೃದಯದ ಭಾವನೆಗಳನ್ನು ಕಾವ್ಯ, ಗೀತ, ನೃತ್ಯ, ಶಿಲ್ಪ ಮುಂತಾದ ಮಾಧ್ಯಮಗಳ ಮೂಲಕ ಸಾಕ್ಷಾತ್ಕಾರ ಮಾಡಿಕೊಡುವುದು ಕಲೆಯ ಉದ್ದೇಶ. ಪ್ರಕೃತಿಯ ವಿವಿಧ ವಸ್ತುಗಳನ್ನು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ವಿವರಿಸಿ ಅವುಗಳ ನಿಕಟ ಸಂಬಂಧಗಳನ್ನು ಸೂತ್ರಗಳ ರೂಪದಲ್ಲಿ ನಿರೂಪಿಸುವುದು ವಿಜ್ಞಾನದ ವಿಶಿಷ್ಟ ಉದ್ದೇಶ. ನಮ್ಮ ಪವಿತ್ರ ಭಾವನೆಗಳ ಸ್ವರೂಪವನ್ನೂ ಧರ್ಮಾಧರ್ಮಗಳ ಸ್ವರೂಪವನ್ನೂ ತಿಳಿಸುವುದು ಮತದ ಉದ್ದೇಶ. ಕಲೆ, ವಿಜ್ಞಾನ ಮತ್ತು ಮತಗಳಲ್ಲಿ ಪ್ರತಿಯೊಂದಕ್ಕೂ ತನ್ನ ವಿಶಿಷ್ಟ ಉದ್ದೇಶವನ್ನು ಈಡೇರಿಸಲು ಸ್ವಾತಂತ್ರ್ಯವಿರಬೇಕು ಎಂಬುದು ನ್ಯಾಯಸಮ್ಮತವಾದದ್ದು. ಒಂದು ಇನ್ನೊಂದು ಮಾಡುವ ಕೆಲಸವನ್ನು ನಿರ್ವಹಿಸಲಾರದು. ಪ್ರಕೃತಿಯ ಕಾರ್ಯಕಾರಣ ಸಂಬಂಧವನ್ನು ಕಲೆ ತಿಳಿಸಲಾರದು. ಮಾನವ ಹೃದಯದ ಭಾವಗಳನ್ನು ವಿಜ್ಞಾನ ಸಾಕ್ಷಾತ್ಕಾರ ಮಾಡಿಕೊಡಲಾರದು. ಕಲೆ ಮತ್ತು ವಿಜ್ಞಾನಗಳು ಪೂಜ್ಯಭಾವನೆಗಳ, ಧರ್ಮಾಧರ್ಮಗಳ, ಸ್ವರೂಪವನ್ನು ಮತದಂತೆ ತಿಳಿಸಲಾರವು. ಹಾಗೆಯೇ ಮತವೂ ವಿಜ್ಞಾನ ತಿಳಿಸುವಂತೆ ಕಾರ್ಯ ಕಾರಣಸಂಬಂಧವನ್ನು ಪ್ರಾಮಾಣಿಕವಾಗಿ ತಿಳಿಸಲಾರದೆ. ಹಾಗೆ ಒಂದು ಇನ್ನೊಂದರ ಉದ್ದೇಶವನ್ನು ಈಡೇರಿಸಲು ಪ್ರಯತ್ನಪಟ್ಟಾಗ ಅದು ತನ್ನ ಉದ್ದೇಶವನ್ನೂ ಈಡೇರಿಸದೆ ಇನ್ನೊಂದರ ಉದ್ದೇಶಕ್ಕೂ ಭಂಗ ತರಬಹುದು.
ಕಲೆ, ವಿಜ್ಞಾನ ಮತ್ತು ಮತ-ಈ ಮೂರೂ ಮಾನವನ ಜೀವನಕ್ಕೆ ಅಗತ್ಯವಾದವು. ಆದ್ದರಿಂದ ಮಾನವ ತುಂಬ ಹಿಂದಿನ ಕಾಲದಿಂದ ಇವುಗಳಲ್ಲಿ ಆಸಕ್ತಿ ಹೊಂದಿರುವುದು ಸ್ವಾಭಾವಿಕ. ಇವು ಮಾನವ ಜೀವನದಲ್ಲಿ ಹಾಸುಹೊಕ್ಕಾಗಿವೆ. ಸಂಗೀತ, ಸಾಹಿತ್ಯ, ಚಿತ್ರ ಮತ್ತು ಶಿಲ್ಪಗಳಲ್ಲಿ ಜನರಿಗೆ ಆಸಕ್ತಿ ಇರುವಂತೆಯೇ ಭೌತ ವಿಜ್ಞಾನ, ಜೀವವಿಜ್ಞಾನಗಳಲ್ಲೂ ಮತಧರ್ಮಗಳಲ್ಲೂ ಆಸಕ್ತಿ ಇದೆ. ತುಂಬ ಹಿಂದಿನ ಕಾಲದಿಂದ ಮಾನವ ಈ ಆಸಕ್ತಿಗಳನ್ನು ಜೊತೆಜೊತೆಯಲ್ಲಿ ಈಡೇರಿಸಲು ಪ್ರಯತ್ನಪಟ್ಟಿರುತ್ತಾನೆ. ಆದರೆ ಕಾಲಕ್ರಮದಲ್ಲಿ ಒಂದೊಂದರ ವೈಶಿಷ್ಟ್ಯವನ್ನೂ ಬೆಳೆಸಲು ಒಂದೊಂದನ್ನು ಪ್ರತ್ಯೇಕಿಸಿ ಅದನ್ನೇ ತನ್ನ ಮುಖ್ಯವೃತ್ತಿಯಾಗಿ ಮಾಡಿಕೊಂಡು ಒಂದೊಂದಕ್ಕೂ ಹೆಚ್ಚು ಕಾಲವನ್ನೂ ಶ್ರಮವನ್ನೂ ವಿನಿಯೋಗಿಸಲಾರಂಭಿಸಿದ. ಕಲೆಗಾಗಿಯೇ ವಿಜ್ಞಾನಕ್ಕಾಗಿಯೇ ಅಥವಾ ಮತಕ್ಕಾಗಿಯೇ ಅವರು ಹೆಚ್ಚು ಸಮಯವನ್ನೂ ವ್ಯವಸಾಯವನ್ನೂ ಮುಡುಪಾಗಿ ಇಟ್ಟುಕೊಂಡರೂ ಪ್ರತಿಯೊಬ್ಬನೂ ಅನ್ನ, ಬಟ್ಟೆ, ವಸತಿ ಮುಂತಾದ ಜೀವನದ ಅಗತ್ಯಗಳಿಗೆ ಗಮನ ಕೊಡಲೇಬೇಕು. ಇತರರೊಡನೆ ವ್ಯವಹರಿಸುವಾಗ ನೀತಿಧರ್ಮಗಳನ್ನು ಪರಿಪಾಲಿಸಬೇಕು. ಪ್ರಕೃತಿಯ ನಿಯಮದ ವಿಚಾರವಾಗಿ ಸ್ವಲ್ಪ ಮಟ್ಟಿಗಾದರೂ ಜ್ಞಾನಾರ್ಜನೆ ಮಾಡಬೇಕು. ಆದ್ದರಿಂದ ಕಲೆಗಾಗಿಯೇ, ವಿಜ್ಞಾನಕ್ಕಾಗಿಯೇ, ಮತಕ್ಕಾಗಿಯೇ ಸಂಪೂರ್ಣವಾಗಿ ಬಾಳುತ್ತೇನೆಂಬುದು ಅಸಾಧ್ಯ. ಕಲೆಗಾರನೂ ವಿಜ್ಞಾನಿಯೂ ಪಾದ್ರಿಯೂ ಪುರೋಹಿತನೂ ತಾವು ಅವಲಂಬಿಸಿದ ಮುಖ್ಯವೃತ್ತಿಯ ಮೂಲಕ ಜೀವನ ನಡೆಸಲು, ಅಗತ್ಯವಾದಷ್ಟನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಕಾವ್ಯಾಭ್ಯಾಸ, ವಿಜ್ಞಾನ ಸಂಶೋಧನೆ, ಮತಬೋಧೆ ಇವುಗಳ ಮುಖ್ಯ ಉದ್ದೇಶ ಹಣಸಂಪಾದನೆ ಮತ್ತು ಕೀರ್ತಿಸಂಪಾದನೆಯಾಗದಿದ್ದರೂ ಇವು ಉದ್ದೇಶಗಳಾಗಿ ಇದ್ದೇ ಇರುತ್ತವೆ. ಕಲೆಗಾಗಿ ಕಲೆ, ವಿಜ್ಞಾನಕ್ಕಾಗಿ ವಿಜ್ಞಾನ ಎಂದು ವಾದಿಸುವವರು ಯಾರೂ ತಮಗೆ ಲೇಶಮಾತ್ರವೂ ಈ ಉದ್ದೇಶಗಳಿಲ್ಲವೆಂದು ಹೇಳಲಾರರು. ಕಲೆಗಾಗಿ ಕಲೆ, ವಿಜ್ಞಾನಕ್ಕಾಗಿ ವಿಜ್ಞಾನ ಎಂದು ವಾದಿಸುವವರು ಕಲೆಯ ಅಂಶಕ್ಕೆ, ವಿಜ್ಞಾನದ ಅಂಶಕ್ಕೆ ಹೆಚ್ಚು ಬೆಲೆಕೊಡುತ್ತಾರೆ. ಕೀರ್ತಿ, ಹಣಸಂಪಾದನೆ ಮುಂತಾದವನ್ನು ಗೌಣವಾಗಿ ಎಣಿಸುತ್ತಾರೆ. ಹೀಗೆ ಇತರ ಮೌಲ್ಯಗಳನ್ನು ಗೌಣವಾಗಿ ಎಣಿಸಿ ಕಲೆಯ ಮೌಲ್ಯವೇ ಪ್ರಧಾನವೆಂದೆನಿಸುವುದು ಒಪ್ಪಬೇಕಾದ್ದೇ. ಆದರೆ ಗೌಣವಾಗಿಯಾದರೂ ಇಲ್ಲವೇ ಇಲ್ಲವೆಂದು ವಾದಿಸುವುದು ಹಠವಾಗುತ್ತದೆ.

ಕಲೆಯನ್ನು ಆರಾಧಿಸುವುದು ತಮ್ಮ ಸ್ವಂತ ಸಂತೋಷಕ್ಕಾಗಿ, ಇತರರು ಅದನ್ನು ಮೆಚ್ಚಲಿ ಬಿಡಲಿ ಅದನ್ನು ತಾವು ಲಕ್ಷಿಸುವುದಿಲ್ಲ ಎಂದು ಕೆಲವು ಕಲೆಗಾರರು ಹೇಳುವುದುಂಟು. ಇಂಥ ಕಲೆಗಾರರನ್ನು ಸ್ವಾರ್ಥಪರ (ಎಗೋಯಿಸ್ಟ್‌) ಕಲೆಗಾರರೆಂದು ಕರೆಯುವುದು ವಾಡಿಕೆ. ಇವರು ಕೆಲವು ವೇಳೆ ಅರಸಿಕರನ್ನು ಕುರಿತು ಅಹಂಕಾರದಿಂದ ಕಟುವಾಗಿ ಮಾತನಾಡುವುದುಂಟು. ನಿಜವಾಗಿಯೂ ಇವರ ಬಿರಿನುಡಿಗೆ ಕಾರಣವಾದ್ದು ತಮ್ಮ ಕಲೆಯನ್ನು ಜನ ಮೆಚ್ಚಲಿಲ್ಲವೆಂಬ ಅಂತರಂಗದ ಸಂಕಟ. ಅವರು ಒಂದು ಪದ್ಯವನ್ನೋ ಚಿತ್ರವನ್ನೋ ಹಾಡನ್ನೋ ರಚಿಸುವುದು ಜನರ ಮೆಚ್ಚಿಗೆಗಾಗಿ. ಅವರ ಅಂತರಂಗದ ಉದ್ದೇಶ ತಮ್ಮ ಕೃತಿ ಜನರಿಗೆ ಮೆಚ್ಚಿಗೆಯಾಗಲೆಂದೇ, ತಮ್ಮ ಸ್ವಂತ ಸಂತೋಷಕ್ಕಾಗಿ ಮಾತ್ರ ಅದನ್ನು ರಚಿಸಿದುದಾದರೆ ಅದನ್ನು ಪ್ರಕಟಿಸದೆ ತಮ್ಮ ಅಂತರಂಗದಲ್ಲೆ ಬಚ್ಚಿಟ್ಟುಕೊಳ್ಳಬೇಕಾಗಿತ್ತು. ಹಾಗೆ ಬಚ್ಚಿಟ್ಟುಕೊಳ್ಳದೆ ಕಲೆಗಾರರು ಅವನ್ನು ಪ್ರಕಟಿಸುತ್ತಾರೆ. ಹಾಗೆ ಪ್ರಕಟಿಸುವುದರ ಒಳ ಉದ್ದೇಶ, ಕಲೆ ಸಾಮಾಜಿಕ ಮೆಚ್ಚಿಕೆ ಪಡೆಯಲೆಂಬುದೇ, ಈ ಒಳ ಉದ್ದೇಶಕ್ಕೂ ಅವರು ಆಡುವ ಮಾತಿಗೂ ಅಸಾಂಗತ್ಯವಿದೆಯೆಂಬುದನ್ನು ಅವರು ಮನಗಂಡಿರುವುದಿಲ್ಲ. ತನಗಾಗಿಯೇ ತನ್ನ ಕಲೆಯೆಂಬಾತ ಕೇವಲ ಹೃದಯ ಕವಿಯಾಗಿರಬೇಕಾಗಿತ್ತು. ತನ್ನ ಮನಸ್ಸಿನಲ್ಲೇ ತನ್ನ ಭಾವವನ್ನು ಕಂಡು ಸಂತುಷ್ಟನಾಗಬೇಕಾಗಿತ್ತು. ಯಾವ ಕಲೆಗಾರನೂ ಅಷ್ಟಕ್ಕೇ ತೃಪ್ತನಾಗುವುದಿಲ್ಲ. ತನ್ನ ಮನಸ್ಸಿಗೆ ಹೊಳೆದ ಒಂದು ಸುಂದರ ಭಾವವನ್ನು ಪದ್ಯರೂಪದಲ್ಲೋ ಚಿತ್ರರೂಪದಲ್ಲೋ ವಿಗ್ರಹರೂಪದಲ್ಲೋ ವಿಷಯೀಕರಿಸಿ ಪ್ರಕಟಿಸುತ್ತಾನೆ. ಹೀಗೆ ಮನಸ್ಸಿನಲ್ಲಿದ್ದದ್ದನ್ನು ಮಾತಿನ ಮೂಲಕ ಅಥವಾ ವರ್ಣರೇಖೆಗಳ ಮೂಲಕ ಹೊರಹಾಕುವುದರ ಉದ್ದೇಶವೆಂದರೆ ಅವನ ಮನಸ್ಸಿನ ಭಾವನೆ ಆ ಮಾಧ್ಯಮದ ಮೂಲಕ ಇತರರ ಮನಸ್ಸಿಗೆ ಹಾಯಬೇಕೆಂಬುದೇ. ಈ ಸಾಮಾಜಿಕ ಆಸಕ್ತಿ ಇಲ್ಲದಿದ್ದರೆ ಯಾವುದೊಂದು ಕಲಾಕೃತಿಯೂ ಹುಟ್ಟುವ ಅಗತ್ಯವೇ ಇರುವುದಿಲ್ಲ. ಕವಿ-ಸಹೃದಯ ಸಂಬಂಧ ಕಲೆಯ ಸೀಮೆಯಲ್ಲಿ ಅವಿಭಾಜ್ಯ ಮತ್ತು ಅಗತ್ಯ ಸಂಬಂಧ. ಕವಿತೆಯನ್ನು ಸವಿಯುವ ಸಹೃದಯರಿಲ್ಲದಿದ್ದರೆ ಕವಿತೆಯ ಚಿಲುಮೆ ಬತ್ತಿ ಹೋಗುತ್ತದೆ. ರಚಿಸಿದ ಕೃತಿಗೆ ಸಹೃದಯರ ಪ್ರೋತ್ಸಾಹ ದೊರಕಬೇಕೆಂದೂ ಅರಸಿಕರಿಗೆ ಕವಿತೆಯನ್ನು ಹೇಳುವ ದುರದೃಷ್ಟ ತಮಗೆ ಬಾರದಿರಲೆಂದೂ ರಸಿಕರಾದ ಜನ ದೊರಕುವುದು ತಮ್ಮ ಪೂರ್ವಜನ್ಮದ ಸುಯೋಗವೆಂದೂ ಅನೇಕ ಕವಿಗಳು ಭಾವಿಸುತ್ತಿದ್ದರೆಂಬುದಕ್ಕೆ ಪೂರ್ವ ಕವಿಕೃತಿಗಳಿಂದ ಮಾತುಗಳನ್ನು ಧಾರಾಳವಾಗಿ ಉದ್ಧರಿಸಬಹುದು.

ಸಾಮಾಜಿಕರೂ ಕಲೆಗಾರರ ಕೊಡುಗೆಯನ್ನು ಮೆಚ್ಚಿ ಅವರಿಗೆ ಕೃತಜ್ಞತೆ ಸಲ್ಲಿಸಿರುತ್ತಾರೆ. ಕವಿ ಕೃತಿಯನ್ನು ಆನೆ ಅಂಬಾರಿಯ ಮೇಲೆ ಮೆರವಣಿಗೆ ಮಾಡಿದ ಸಂದರ್ಭಗಳುಂಟು. ಚಿತ್ರಗಳಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಅವನ್ನು ಕಲಾಸಂಗ್ರಹಾಲಯಗಳಲ್ಲಿಟ್ಟು ಕಲೆಯಲ್ಲಿ ತಮಗಿರುವ ಪ್ರೀತಿ ಗೌರವಗಳನ್ನು ತೋರಿಸಿರುವವರುಂಟು. ಸಂಗೀತಗಾರರನ್ನು, ಶಿಲ್ಪಿಗಳನ್ನು ಸಮಾಜ ಸನ್ಮಾನಿಸುತ್ತಿರುವುದು ಕಲೆಗೂ ಸಮಾಜಕ್ಕೂ ಇರುವ ನಿಕಟ ಸಂಬಂಧವನ್ನು ಎತ್ತಿ ತೋರಿಸುತ್ತದೆ.

ಕಲೆ ಸಮಾಜವನ್ನು ಸಂಸ್ಕೃತಗೊಳಿಸುವ ಒಂದು ಉತ್ತಮ ಶಕ್ತಿ. ಆದ್ದರಿಂದ ಕಲೆಯನ್ನು ಬೋಧಿಸುವುದಕ್ಕಾಗಿ ಸಮಾಜ ಶಿಕ್ಷಣ ಸಂಸ್ಥೆಗಳನ್ನು ಏರ್ಪಡಿಸಿದೆ. ಕಲಾಕ್ಷೇತ್ರಗಳಿಗೆ ನೆರವು ನೀಡಿದೆ. ಸಮಾಜದ ಮೇಲೆ ಕಲೆಯ ಪ್ರಭಾವ ಅತಿಶಯವಾಗಿರುವುದರಿಂದ ಒಳ್ಳೆಯ ಕಲೆಯನ್ನು ಪ್ರೋತ್ಸಾಹಿಸಿದಂತೆಯೇ ಸಮಾಜಕ್ಕೆ ಕೇಡುಂಟು ಮಾಡುವ ಅಶ್ಲೀಲ ಕಲೆಯನ್ನೂ. ನೀತಿಗೆಟ್ಟ ಕಲೆಯನ್ನೂ ತಡೆಗಟ್ಟಲೂ ಹದ್ದಿನಲ್ಲಿಡಲೂ ಸಮಾಜ ಪ್ರಯತ್ನಪಟ್ಟಿರುತ್ತದೆ. ಕಲೆಗೂ ಸಮಾಜಕ್ಕೂ ಅಗತ್ಯ ಸಂಬಂಧವಿರುವುದರಿಂದ ಕಲೆಯನ್ನು ಯಾವ ರೀತಿಯಲ್ಲಿ ಪೋಷಿಸಬೇಕು, ಯಾವ ರೀತಿಯಲ್ಲಿ ಅದನ್ನು ಸಮಾಜದ ಹತೋಟಿಗೆ ಒಳಪಡಿಸಬೇಕು ಎಂಬುದು ಸಮಾಜಶಾಸ್ತ್ರದ ಒಂದು ಮುಖ್ಯ ಸಮಸ್ಯೆಯೆಂದು ಪರಿಗಣಿಸಲಾಗಿದೆ.
ಕಲೆಗೂ ಸಮಾಜಕ್ಕೂ ಇರುವ ನಿಕಟಸಂಬಂಧವನ್ನು ಇನ್ನೊಂದು ರೀತಿಯಲ್ಲಿ ಸ್ಪಷ್ಟಪಡಿಸಬಹುದು. ಒಂದೊಂದು ಕಾಲದ ಕಲೆಯೂ ಆಯಾ ಕಾಲದ ಸಮಾಜವನ್ನು ಪ್ರತಿಬಿಂಬಿಸುತ್ತದೆ. ಆದಿವಾಸಿಗಳ ಸಾಮಾಜಿಕ ಜೀವನ ಅವರ ಕಲೆಯಲ್ಲಿ ಪ್ರತಿಫಲಿಸಿರುತ್ತದೆ. ಹಳ್ಳಿಯ ಜನರ ಕಲೆಗಳೂ ಪ್ರಾಚೀನ ಸಮಾಜದ ಕಲೆಗಳೂ ಆಧುನಿಕ ಸಮಾಜದ ಕಲೆಗಳೂ ಬೇರೆಬೇರೆಯಾಗಿರುವುದಕ್ಕೆ ಆಯಾ ಸಮಾಜಗಳ ಜೀವನದ ವೈವಿಧ್ಯ ಕಾರಣ.

ಆದಿವಾಸಿ ಸಮಾಜದ ಕಲೆಗಳು
ಆದಿವಾಸಿಗಳ ಕಲೆ ಮುಖ್ಯವಾಗಿ ಚಿತ್ರರೂಪವಾದ ಸಂಕೇತಗಳಾಗಿವೆ. ಆ ಸಂಕೇತಗಳು ಅಲಂಕಾರಗಳು ಮಾತ್ರವಲ್ಲ, ಕೇಡು ಮತ್ತು ಕಾಯಿಲೆಗಳನ್ನು ನಿವಾರಿಸುವ ರಕ್ಷೆಗಳಾಗಿಯೂ ಇವೆ. ಅವರ ಚಿತ್ರಗಳು ಅವರ ಜೀವನದಲ್ಲಿ ಪರಿಣಾಮಕಾರಿಗಳಾದ ಬೇಟೆ ಮತ್ತು ಯುದ್ಧಗಳನ್ನು ಪ್ರತಿಬಿಂಬಿಸುತ್ತವೆ. ಅವರ ಶಿಲ್ಪ ವೀರಪ್ರಶಸ್ತಿಗಾಗಿ ಹುಟ್ಟಿದ್ದು. ಅವರು ಚಿತ್ರಗಳನ್ನು ಮಾಟಕ್ಕಾಗಿಯೂ ಉಪಯೋಗಿಸುತ್ತಾರೆ. ಮಾಟಕ್ಕಾಗಿ ಅವರು ಉಪಯೋಗಿಸುವ ಸಂಕೇತಗಳು ಹಲವು ಬಗೆಯವು. ದೋಣಿಗಳ ಮೇಲೆ ಕೆತ್ತಿದ ಮೀನಿನ ಸಂಕೇತದ ಉದ್ದೇಶ ಮಾಟ. ಪ್ರಾಚೀನ ಈಜಿಪ್ಟರ ಕಮಲ ಬಹು ಮುಖ್ಯ ಸಂಕೇತ. ಅವರ ಮುಖ್ಯ ದೇವತೆಯಾದ ಸೂರ್ಯನ ಸಂಕೇತವದು. ಅದರ ಬಳಕೆ ಈಜಿಪ್ಟರಿಂದ ಗ್ರೀಸಿಗೂ ರೋಮಿಗೂ ಬ್ರಿಟನ್ನಿಗೂ ಹಬ್ಬಿತು. ಪ್ರಾಕ್ತನರು ಕಲೆಯ ಸಂಕೇತಗಳನ್ನು ತಮ್ಮ ಕುಲದೇವತೆಯ ಲಾಂಛನಗಳಾಗಿ ಬಳಸಿರುವುದೂ ಉಂಟು. ಅವನ್ನು ಕೋಲುಗಳ ಮೇಲೆ ಪ್ರದರ್ಶಿಸುತ್ತಾರೆ. ಈ ಲಾಂಛನಗಳು ಪ್ರಾಣಿರೂಪವಾಗಿರಬಹುದು ಅಥವಾ ಸಸ್ಯರೂಪವಾಗಿರಬಹುದು. ಪ್ರಾಕ್ತನರು ವೀರರ ರೂಪಗಳನ್ನು, ದೇವತೆಗಳ ರೂಪಗಳನ್ನು ಉತ್ಸವಗಳ ಕಾಲದಲ್ಲಿ ಮುಖವಾಡಗಳಾಗಿ ಧರಿಸುತ್ತಿದ್ದರು.

ಹಳ್ಳಿಗರ ಕಲೆ
ಹಳ್ಳಿಗರ ಕಲೆಯಲ್ಲಿ ಪ್ರಾಕ್ತನರ ಕಲೆಯ ಅಂಶಗಳು ಹೆಚ್ಚಾಗಿ ಉಳಿದುಕೊಂಡಿವೆ. ಇವನ್ನು ಭಾರತದ ಹಳ್ಳಿಗಳ ಕಲೆಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಳ್ಳಿಗಳಲ್ಲಿ ವಿಶೇಷವಾಗಿ ಪುಜಿಸುವ ದೇವತೆಗಳೆಂದರೆ ಮಾತೃದೇವತೆ ಮತ್ತು ಭೂತಪ್ಪ. ಈ ಗುಡಿಗಳಲ್ಲಿ ಇವುಗಳ ಮುಖವಾಡಗಳನ್ನು ಇಟ್ಟಿರುತ್ತಾರೆ. ಉತ್ಸವಕಾಲದಲ್ಲಿ ಆ ಮುಖವಾಡಗಳನ್ನು ಧರಿಸಿ ನರ್ತನ ಮಾಡುತ್ತಾರೆ. ಹಳ್ಳಿಗಳಲ್ಲಿ ಕಲೆ ಮತಕ್ಕೆ ಮಾತ್ರ ಮೀಸಲಾಗಿಲ್ಲ. ಮದುವೆ ಮುಂತಾದ ಲೌಕಿಕ ಸಂದರ್ಭಗಳಲ್ಲೂ ಸುಗ್ಗಿಯ ಕಾಲದಲ್ಲೂ ಹಾಡು ಮತ್ತು ನರ್ತನಗಳ ಮೂಲಕ ಅದು ಹೊಮ್ಮುತ್ತದೆ. ಹಳ್ಳಿಗಳಲ್ಲಿ ಹೆಂಗಸರು ತಾವು ಕಟ್ಟಿದ ಹಾಡುಗಳನ್ನು ರಾಗಿ ಬೀಸುವ ಕಾಲದಲ್ಲಿ ಹಾಡುತ್ತಾರೆ. ಗಂಡಸರ ಹಾಡುಗಳು ವಿಶೇಷವಾಗಿ ಲಾವಣಿಗಳ ರೂಪದಲ್ಲಿರುತ್ತವೆ. ಹಳ್ಳಿಯ ಜನ ತಮ್ಮ ಗುಡಿಗಳ, ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯುತ್ತಾರೆ. ಗರುಡಿಮನೆಯ ಮುಂದಿನ ಗೋಡೆಗಳ ಮೇಲೆ ವೀರರ ಮತ್ತು ಹುಲಿಯ ಚಿತ್ರವನ್ನು ಬರೆಯುತ್ತಾರೆ. ಮನೆಯ ಮುಂದೆ ರಂಗೋಲಿಯಲ್ಲಿ ವಿವಿಧ ರೂಪಗಳನ್ನು ಎಳೆಯುವುದೂ ರೂಢಿಯಲ್ಲಿರುವ ಕಲೆ. ವೀರಗಲ್ಲುಗಳಲ್ಲೂ ಗಣೇಶ ಮುಂತಾದ ದೇವತೆಗಳ ಮಣ್ಣಿನ ವಿಗ್ರಹಗಳಲ್ಲೂ ಇವರ ಶಿಲ್ಪ ಪ್ರಕಟವಾಗಿದೆ. ಪೌರಾಣಿಕ ಕಥೆಗಳ ಆಧಾರದ ಮೇಲೆ ಕಟ್ಟಿದ ಇತರ ನಾಟಕಗಳು ಬಯಲು ನಾಟಕಗಳೆಂದು ಪ್ರಸಿದ್ದವಾಗಿವೆ. ಸುಗ್ಗಿಯ ಕಾಲವಾದ ಮೇಲೆ ವರ್ಷಕ್ಕೊಮ್ಮೆ ಹಳ್ಳಿಗಳಲ್ಲಿ ಈ ಬಯಲು ನಾಟಕಗಳನ್ನು ಏರ್ಪಡಿಸುತ್ತಾರೆ. ಹಳ್ಳಿಯವರ ಕಲೆಗಳನ್ನು ಒಟ್ಟಾಗಿ ಸೇರಿಸಿ ಅವುಗಳನ್ನು ನಾಡ ಜನರ ಕಲೆಯೆಂದು ಕರೆಯುವುದು ವಾಡಿಕೆಯಾಗಿದೆ.
ಲಲಿತ ಕಲೆಗಳು
ಲಲಿತಕಲೆಗಳು ಮತ್ತು ಉಪಯುಕ್ತ ಕಲೆಗಳು ಎಂಬ ವಿಂಗಡನೆ ಹುಟ್ಟಿದ್ದು ಆಧುನಿಕ ಸಮಾಜದಲ್ಲಿ. ಹಿಂದಿನ ಕಾಲದಲ್ಲಿ ಈ ವಿಂಗಡನೆ ಇರಲಿಲ್ಲ. ಕಾಮಸೂತ್ರ ಇತ್ಯಾದಿ ಪ್ರಾಚೀನ ಗ್ರಂಥಗಳಲ್ಲಿ ಈ ಭೇದ ಕಾಣುವುದಿಲ್ಲ. ಈ ಗ್ರಂಥಗಳು ಹೆಸರಿಸಿರುವ ಅರವತ್ತು ನಾಲ್ಕು ಕಲೆಗಳಲ್ಲಿ ಶಿಲ್ಪ, ಚಿತ್ರ, ವಾಸ್ತುಶಿಲ್ಪ ಮುಂತಾದ ಲಲಿತಕಲೆಗಳೊಡನೆ ಉಪಯುಕ್ತ ಕಲೆಗಳೂ ಸೇರಿವೆ. ತದನಂತರ ವಿಷ್ಣು ಧರ್ಮೋತ್ತರ, ಮಾನಸೋಲ್ಲಾಸ ಮುಂತಾದ ಗ್ರಂಥಗಳಲ್ಲಿ ಚಿತ್ರ, ಶಿಲ್ಪ ಮುಂತಾದ ಕಲೆಗಳಿಗೆ ವಿಶಿಷ್ಟ ಸ್ಥಾನ ಕೊಟ್ಟಿದೆ. ಅದರಿಂದಾಚೆ, ಒಂದೊಂದು ಲಲಿತಕಲೆಯನ್ನೂ ಅದಕ್ಕೆ ಮೀಸಲಾದ ಗ್ರಂಥಗಳಲ್ಲಿ ಪಾರಿಭಾಷಿಕವಾಗಿ ನಿರೂಪಿಸಲಾಗಿದೆ. ಗ್ರೀಕರಲ್ಲಿ ಅರಿಸ್ಟಾಟಲ್ ‘ಪೊಯೆಟಿಕ್ಸ್‌’ ಎಂಬ ತನ್ನ ಗ್ರಂಥದಲ್ಲಿ ಲಲಿತಕಲೆಗಳಿಗೆ ವಿಶಿಷ್ಟ ಸ್ಥಾನ ಕೊಟ್ಟಿದ್ದಾನೆ. ಪಾಶ್ಚಾತ್ಯ ದೇಶಗಳಲ್ಲಿ ೧೬ನೆಯ ಶತಮಾನದಿಂದ ಆಚೆ ಚಿತ್ರ, ಶಿಲ್ಪ ಮತ್ತು ವಾಸ್ತುಶಿಲ್ಪಗಳಿಗೆ ಸಂಬಂಧಪಟ್ಟ ಗ್ರಂಥಗಳು ಹುಟ್ಟಿಕೊಂಡವು. ಮಧ್ಯಯುಗದಲ್ಲಿ ಇವು ಮತಭಾವನೆಗಳಿಗೆ ವಿಧೇಯವಾಗಿದ್ದುವು. ವಾಸ್ತುಶಿಲ್ಪ ವಿಶೇಷವಾಗಿ, ಕ್ರೈಸ್ತ ದೇವಮಂದಿರಗಳ ನಿರ್ಮಾಣದಲ್ಲಿ ಪ್ರಕಾಶಗೊಂಡಿತ್ತು. ಅಲ್ಲಿಂದೀಚೆಗೆ ಇವು ಮತೀಯ ಭಾವನೆಗಳಿಂದ ಬಿಡುಗಡೆ ಹೊಂದಿ ಲೌಕಿಕವಾದುವು (ಸೆಕ್ಯುಲರ್). ಭಾರತದಲ್ಲೂ ಶಿಲ್ಪ, ಚಿತ್ರ ಮುಂತಾದವು ಮೊದಲಲ್ಲಿ ಬೌದ್ಧ ಧರ್ಮಕ್ಕೂ ಅನಂತರದಲ್ಲಿ ಶೈವ ಮತ್ತು ವೈಷ್ಣವ ಧರ್ಮಗಳಿಗೂ ಇಸ್ಲಾಂಮತಕ್ಕೂ ಅಧೀನವಾಗಿದ್ದುವು. ಈ ಕಲೆಗಳ ಮೇಲೆ ಬೌದ್ಧ, ಶೈವ ಮತ್ತು ವೈಷ್ಣವ ಧರ್ಮಗಳ ಪ್ರಭಾವ ಅಜಂತ, ಎಲ್ಲೋರ, ಮುಂತಾದ ಗುಹಾಂತರ ದೇವಾಲಯಗಳಲ್ಲಿ ಕ್ರಮವಾಗಿ ಕಂಡುಬರುತ್ತದೆ. ಈಚಿನ ಕಾಲದಲ್ಲಿ ಈ ಕಲೆಗಳು ಸ್ವಲ್ಪಮಟ್ಟಿಗೆ ಲೌಕಿಕವಾಗಿವೆ. ಕಾಂಗ್ರ ಚಿತ್ರಕಲೆ ಸಾಮಾನ್ಯ ಜನರ ಲೌಕಿಕಜೀವನವನ್ನು ಪ್ರತಿಬಿಂಬಿಸುತ್ತದೆ. ರಜಪುತ ಮತ್ತು ಮುಸ್ಲಿಂ ಚಿತ್ರಕಲೆಗಳು ಪ್ರಣಯ, ವೀರ ಮುಂತಾದ ಭಾವನೆಗಳ ಪ್ರತಿಬಿಂಬಗಳಾಗಿವೆ. ಈಚೆಗೆ ಪಾಶ್ವಾತ್ಯ ದೇಶಗಳಲ್ಲಿ ಪ್ರಚಾರಕ್ಕೆ ಬಂದಿರುವುದು ಹೊಸ ಬಗೆ. ಹಿಂದಿನವುಗಳಲ್ಲಿ ವ್ಯಕ್ತಿಗಳ, ಗಿಡಗಳ, ಪ್ರಾಣಿಗಳ ರೂಪ ಚಿತ್ರಿತವಾಗಿತ್ತು. ಅಮೂರ್ತ ವಿಧಾನದ ಚಿತ್ರಗಳಲ್ಲಿ ಕೇವಲ ರೇಖಾವಿನ್ಯಾಸವಿದೆ ಅಥವಾ ಬಣ್ಣಗಳ ವಿನ್ಯಾಸವಿದೆ. ಈ ಬಗೆಯ ಚಿತ್ರಗಳು ಸಾಮಾನ್ಯ ಜನಕ್ಕೆ ಅರ್ಥವಾಗುವುದು ಕಷ್ಟ. ಇದು ಭಾರತೀಯ ಕಲಾ ಕ್ಷೇತ್ರದಲ್ಲೂ ಬಳಕೆಗೆ ಬರುತ್ತಿದೆ.
ಸಾಹಿತ್ಯ
ಸಾಹಿತ್ಯಕ್ಕೆ ಸಮಾಜದಲ್ಲಿ ಸಾರ್ವತ್ರಿಕ ಪುರಸ್ಕಾರವುಂಟು. ಪಾಶ್ಚಾತ್ಯರಿಗೆ ಹೋಮರನ ಮಹಾಕಾವ್ಯಗಳಾದ ಒಡಿಸ್ಸಿ ಮತ್ತು ಇಲಿಯಡ್ ಮತ್ತು ವರ್ಜಿಲ್ಲನ ಮಹಾಕಾವ್ಯವಾದ ಈನಿಯಡ್ ಮತ್ತು ಡಾಂಟೆಯ ಇನ್ಫರ್ನೋ ಮೆಚ್ಚಿನ ಮಹಾಕಾವ್ಯಗಳಾಗಿರುವಂತೆ ಭಾರತೀಯರಿಗೆ ಪ್ರಾಚೀನ ಮಹಾಕೃತಿಗಳಾದ ವಾಲ್ಮೀಕಿ ರಾಮಾಯಣ ಮತ್ತು ವ್ಯಾಸ ಮಹಾಭಾರತ ಮೆಚ್ಚಿನ ಕಾವ್ಯಗಳು. ಭಾರತದ ಎಲ್ಲ ಭಾಷೆಗಳಲ್ಲೂ ಇಂದಿಗೂ ಹೊಸ ಹೊಸ ರಾಮಾಯಣಗಳು, ಮಹಾಭಾರತಗಳು ಬರುತ್ತಿವೆ.

ಸಮಾಜದ ಮೇಲೆ ತುಂಬ ಪ್ರಭಾವಬೀರಿದ ಕಲೆಯೆಂದರೆ ನಾಟಕ. ಕಾಳಿದಾಸ ಹೇಳಿರುವಂತೆ ಇದು ಭಿನ್ನ ರುಚಿಗಳುಳ್ಳ ಸಾಮಾಜಿಕರೆಲ್ಲರಿಗೂ ಒಂದೇ ಸಮನಾಗಿ ಮೆಚ್ಚಿಗೆಯಾದ ಏಕಮಾತ್ರ ಕಲೆ. ಇದನ್ನು ಭಾರತದಲ್ಲಿ ಸ್ಥಾಪಿಸಿದವನು ಭರತಮುನಿಯೆಂದು ಪ್ರತೀತಿ. ಭಾರತದ ನಾಟಕದಲ್ಲಿ ವೃತ್ತ, ನೃತ್ಯ, ಗಾನ ಮುಂತಾದ ಎಲ್ಲ ಕಲೆಗಳಿಗೂ ಅವಕಾಶವಿದೆ. ಆತ ಇದರ ಹತ್ತು ರೂಪಗಳನ್ನು ವಿವರಿಸಿದ್ದಾನೆ. ಆದರೂ ಪ್ರಾಚೀನ ಪಾಶ್ಚಾತ್ಯರಂತೆ ಭಾರತೀಯರು ಹರ್ಷಾಂತ ಮತ್ತು ವಿಷಾದಂತ ನಾಟಕಗಳೆಂಬ ಭೇದವನ್ನು ಕಲ್ಪಿಸಿರುವುದಿಲ್ಲ. ಚಲನಚಿತ್ರವೆಂಬ ಹೊಸ ಕಲೆ ಹುಟ್ಟಿಕೊಂಡು ನಾಟಕವನ್ನು ಈಗ ಹಿಂದೆ ಹಾಕಿದೆ.

ಹಿಂದಿನ ಕಾಲದಿಂದಲೂ ಹುಡುಗರು, ವೃದ್ಧರು, ಹೆಂಗಸರು, ಗಂಡಸರು ಕಿರುಗಥೆಗಳಲ್ಲಿ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಈಗಿನ ಜನಮೆಚ್ಚಿನ ಕಥಾರೂಪ ಕಾದಂಬರಿ. ಈ ಕಲೆಯ ಮೂಲಕ ಸಮಾಜದ ಸಮಸ್ಯೆಗಳನ್ನು ವಿಸ್ತಾರವಾಗಿ ನಿರೂಪಿಸಲು ಸಾಧ್ಯವಾಗಿದೆ. ಸಾವಿರಾರು ಪುಟಗಳಷ್ಟು ಉದ್ದವಾದ ಸಾಮಾಜಿಕ ಕಾದಂಬರಿಗಳು ಹೇರಳವಾಗಿವೆ. ಎಲ್ಲ ದೇಶಗಳಲ್ಲೂ ಕಾದಂಬರಿಗಳನ್ನು ಓದುವವರ ಸಂಖ್ಯೆ ದಿನದಿನಕ್ಕೂ ಈಗ ಏರುತ್ತಿದೆ. ಕೆಲವು ಕಾದಂಬರಿಗಳ ಲಕ್ಷಗಟ್ಟಳೆ ಪ್ರತಿಗಳು ಮುದ್ರಿತವಾಗುತ್ತಿವೆ. 
ಪದ್ಯ ಕಾವ್ಯ ರೂಪಗಳಲ್ಲಿ ಇಂದು ವಿಶೇಷವಾಗಿ ಪ್ರಚಾರದಲ್ಲಿರುವುದು ಭಾವಗೀತೆ. ಈ ಹೊಸ ಪದ್ಯರೂಪ ಭಾರತದಲ್ಲಿ ಬೆಳೆಯುವುದಕ್ಕೆ ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನದ ಪಾಶ್ಚಾತ್ಯ ಕವಿಗಳು ಕಾರಣರು. ಭಾರತದ ಇತರ ಪ್ರಾಂತ್ಯಗಳಂತೆ ಕನ್ನಡನಾಡಿನಲ್ಲೂ ತುಂಬ ಪ್ರಸಿದ್ಧಿಗೆ ಬಂದಿರುವ ಕವಿಗಳು ಭಾವಗೀತೆಯ ಕರ್ತೃಗಳು. ಈ ಹೊಸ ಸಾಹಿತ್ಯರೂಪದ ಮೂಲಕ ಒಂದೇ ಭಾವದ ಸಹಸ್ರ ಮುಖಗಳನ್ನು ಪ್ರಕಾಶಪಡಿಸಲು ಸಾಧ್ಯವಾಗಿದೆ.

ಸಂಗೀತ
ಸಂಗೀತ ಮಾನವನ ಹೃದಯದ ಭಾವಗಳನ್ನು ನೇರವಾಗಿ ಪ್ರತಿಬಿಂಬಿಸುವ ಕಲೆ. ಇದು ನೇರವಾಗಿ ಮಾನವನ ಹೃದಯವನ್ನು ಮಿಡಿಸುತ್ತದೆ. ಶಿಶುಗಳನ್ನೂ, ಪಶುಗಳನ್ನೂ, ಹಾವುಗಳನ್ನೂ ಗಾನ ಆಕರ್ಷಿಸುತ್ತದೆ ಎಂದು ಹೇಳುವುದುಂಟು. ಮತಂಗಮುನಿ ಹೇಳುವಂತೆ ಮಾನವನ ಹೃದಯದ ಭಾವಸಾಕ್ಷಾತ್ಕಾರಕ್ಕೆ ಇದು ಉತ್ತಮಸಾಧನ. ಸಾಹಿತ್ಯ, ಚಿತ್ರ, ಶಿಲ್ಪ ಮುಂತಾದ ಕಲೆಗಳು ಪ್ರಕಾಶಪಡಿಸಬಲ್ಲದು. ಸಂಗೀತ ಮಾನವಜೀವನದಲ್ಲಿ ತುಂಬ ವ್ಯಾಪಕವಾದದ್ದು ; ಜೀವನದ ಎಲ್ಲ ಘಟ್ಟಗಳಲ್ಲೂ ಅದು ಬಳಕೆಗೆ ಬಂದಿದೆ. ಭಾರತದಲ್ಲಿ ಒಂದು ಉತ್ಸವವಾಗಲಿ, ಮೆರವಣಿಗೆಯಾಗಲಿ ನಡೆಯಬೇಕಾದರೆ ವಾಲಗವಿದ್ದೇ ಇರಬೇಕು. ಸಾರ್ವಜನಿಕ ಸಭೆಗಳು ಪ್ರಾರ್ಥನಾ ಗೀತೆಯಿಂದ ಪ್ರಾರಂಭವಾಗುತ್ತವೆ, ರಾಷ್ಟ್ರಗೀತೆಯಿಂದ ಮುಕ್ತಾಯಗೊಳ್ಳುತ್ತವೆ.
ಉಪಯುಕ್ತ ಕಲೆಗಳು : ಲಲಿತಕಲೆಗಳ ಉದ್ದೇಶ ಮನರಂಜನೆಯ ಜೊತೆಗೆ ಜೀವನ ಸೌಕರ್ಯಗಳನ್ನೂ ಈಡೇರಿಸುವುದು. ಇವುಗಳ ಸಂಖ್ಯೆ ಅಪಾರ. ಏಕೆಂದರೆ ಉಪಯುಕ್ತವಾದ ಎಲ್ಲ ವಸ್ತುಗಳೂ ಒಂದು ಸುಂದರ ರೂಪತಾಳಬಹುದು. ಪಾತ್ರೆಗಳು, ಪೀಠಗಳು, ಬಟ್ಟೆಗಳು ಮುಂತಾದ ಯಾವ ಬಳಕೆಯ ವಸ್ತುವಾಗಲಿ, ಯಾವ ಉಪಯುಕ್ತ ವ್ಯವಹಾರವಾಗಲಿ, ಆಟವಾಗಲಿ, ಭಾಷಣವಾಗಲಿ ಅದನ್ನು ಮಾಡುವ ರೀತಿ ಎರಡು. ಅದು ಅಸಂಸ್ಕೃತವಾಗಿರಬಹುದು ಅಥವಾ ಸುಸಂಸ್ಕೃತವಾಗಿರಬಹುದು. ಆತ್ಮಸಂತೋಷಕ್ಕಾಗಿ ಒಪ್ಪವಾಗಿ ಮಾಡಿದ ಎಲ್ಲವೂ ಕಲೆಯಾಗಿ ಪರಿಣಮಿಸುತ್ತದೆ. ಅದು ಸುಸಂಸ್ಕೃತ ಜೀವನದ ಹೆಗ್ಗುರುತು.

ಮುದ್ರಣಕಲೆ
ಈಚೆಗೆ ಹುಟ್ಟಿದ ಉಪಯುಕ್ತ ಕಲೆಯಲ್ಲಿ ಮುದ್ರಣಕಲೆ ಆಧುನಿಕ ಜೀವನದಲ್ಲಿ ತುಂಬ ವ್ಯಾಪಕವಾದದ್ದು. ವಿಜ್ಞಾನ ಮತ್ತು ಯಂತ್ರ ವಿದ್ಯೆ ಅಗಾಧವಾಗಿ ಬೆಳೆದಿರುವುದರಿಂದ ಮುದ್ರಣಕಲೆ ವಿವಿಧ ರೂಪಗಳನ್ನು ತಾಳಿದೆಯಲ್ಲದೆ ಮುದ್ರಣದ ವೇಗವೂ ಹೆಚ್ಚಿದೆ. ವೃತ್ತಪತ್ರಿಕೆಗಳ ಜನಪ್ರಿಯ ಪ್ರಸಾರಕ್ಕೆ ಮುದ್ರಣಕಲೆಯೇ ಕಾರಣ. ನಾನಾ ಆಕೃತಿಗಳನ್ನು ಅನೇಕ ಬಣ್ಣಗಳಲ್ಲಿ ಕಾಗದದ ಮೇಲೂ ಬಟ್ಟೆಗಳ ಮೇಲೂ ಮುದ್ರಿಸಲು ಸಾಧ್ಯವಾಗಿದೆ. ಕಟ್ಟಡಗಳ, ನಕಾಶೆಗಳ, ಭೂಪಟಗಳ, ಸಂಗೀತ ಭಾಷಣಗಳ ಧ್ವನಿಮುದ್ರಿಸಿಕೊಳ್ಳುವುದು ಇಂದು ಸಾಧ್ಯ. ಹೀಗೆ ವಿಜ್ಞಾನ ಮತ್ತು ಯಂತ್ರ ವಿದ್ಯೆಯ ಸಹಾಯದಿಂದ ವಿದ್ಯೆ ಮತ್ತು ಕಲೆಯ ಪ್ರಚಾರ ವಿಸ್ತರಿಸಿದೆ. ಮಾನವ ನಿರ್ಮಿತ ಕಂಪ್ಯುಟರ್ ಈಗ ಎಲ್ಲ ಕ್ಷೇತ್ರಗಳಲ್ಲಿ ತನ್ನ ಪ್ರಭಾವ ಬೀರಿ ಹೊಸ ಆವಿಷ್ಕಾರಗಳತ್ತ ಮುನ್ನಡೆಯುತ್ತಿದೆ. ಹಾಗೂ ಮುದ್ರಣ ಕಲೆಯೂ ಇದರ ಉಪಯೋಗ ಪಡೆದಿದೆ.	(ಜಿ.ಎಚ್.)

ಒಟ್ಟಿನಲ್ಲಿ ಇಷ್ಟು ಹೇಳಬಹುದು. ಕಲೆ ಎಂಬ ಪದಕ್ಕೆ ಸ್ಪಷ್ಟವೂ ಪರಿಮಿತವೂ ಖಚಿತವೂ ಆದ ಅರ್ಥ ಇರುವಂತೆ ಸಮಾಜ ಎಂಬುದಕ್ಕೆ ಈ ಬಗೆಯಲ್ಲಿ ಸ್ಪಷ್ಟವಾಗಿ ಕಾಣುವುದಿಲ್ಲ. ಜನರು, ಅವರ ನಡೆವಳಿಕೆಯ ರೀತಿ, ಅವರನ್ನು ಸುತ್ತಿರುವ ಯುಗಧರ್ಮ, ಅವರ ಆಶೋತ್ತರಗಳು, ಏರ್ಪಟ್ಟಿರುವ ಸಂಘ ಸಂಸ್ಥೆಗಳು, ಒಟ್ಟಿನ ವ್ಯವಸ್ಥೆ ಎಲ್ಲವೂ ಸಮಾಜ ಎಂಬುದರ ಪ್ರತ್ಯೇಕಿಸಲಾಗದ ಅಂಶಗಳಾಗಿವೆ. ಯಾವುದೇ ಸಮಾಜವಾಗಲಿ ಅದಕ್ಕೆ ತಾತ್ಕಾಲಿಕವಾಗಿದ್ದು ಮರೆಯಾಗುವ ಬಾಹ್ಯ ಲಕ್ಷಣವೂ ಉಂಟು, ಅದರ ಆಳದಲ್ಲಿದ್ದುಕೊಂಡು ಹಲವು ಕಾಲ ಇರುವ ಗುಣಲಕ್ಷಣವೂ ಉಂಟು. ಕಲೆಗೂ ಸಮಾಜಕ್ಕೂ ಇರುವ ಸಂಬಂಧವನ್ನು ಚಿಂತಿಸುವಾಗ ಈ ಎರಡನ್ನೂ ಲಕ್ಷ್ಯಕ್ಕೆ ತಂದುಕೊಳ್ಳಬೇಕು.

ಮತಧರ್ಮಕ್ಕೆ ಸೇರಿದ ಸಾಮಾಜಿಕ ವ್ಯವಸ್ಥೆ ಸಾಧಾರಣವಾಗಿ ಹೆಚ್ಚು ಕಾಲ ಏಕಬಗೆಯಲ್ಲಿ ಇರುತ್ತದೆ; ದೊಡ್ಡ ಧಾರ್ಮಿಕ ವಿಪ್ಲವ ಉಂಟಾದಾಗ ಮಾತ್ರ ಆ ವ್ಯವಸ್ಥೆ ಅಷ್ಟಿಷ್ಟು ಮಾರ್ಪಾಟು ಹೊಂದುತ್ತದೆ. ಪುರಾತನ ಈಜಿಪ್ಟ್‌, ಪ್ರಾಚೀನ ಗ್ರೀಸ್, ಪ್ರಾಚೀನ ರೋಮನ್ ಚಕ್ರಾಧಿಪತ್ಯ, ಮತ್ತು ಮಧ್ಯಯುಗೀನ ಯುರೋಪಿನಲ್ಲಿ ನಿರ್ಮಿತವಾದ ದೇವಾಲಯಗಳೂ ವಿಗ್ರಹಗಳೂ ಚಿತ್ರಗಳೂ ರೂಪುಗೊಂಡ ಸಂಗೀತ ಪದ್ಧತಿಗಳೂ ನೂರಾರು ವರ್ಷ ತಮ್ಮತಮ್ಮ ಸಂಪ್ರದಾಯವನ್ನು ತಪ್ಪದೆ ಅನುಸರಿಸುತ್ತಿದ್ದುವು. ಆಧುನಿಕಯುಗ ಪ್ರಾರಂಭವಾದ ಮೇಲೆ ಅವುಗಳಲ್ಲಿ ಬದಲಾವಣೆ ಉಂಟಾಯಿತು. ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳು ಬೇಗಬೇಗ ವ್ಯತ್ಯಸ್ತವಾಗುತ್ತ ಹೋಗುವುದು ಸಾಧ್ಯ. ಅಷ್ಟೇ ಬೇಗಬೇಗ ಕಲೆಯ ರೀತಿ ವ್ಯತ್ಯಾಸ ಹೊಂದುವುದಲ್ಲ. ಕಲೆ ಸಾಧಾರಣವಾಗಿ ಸಂಪ್ರದಾಯಾನುವರ್ತಿ; ವಾಡಿಕೆಯಾದ ವಿಧಾನ ಮತ್ತು ತಂತ್ರವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಪ್ರತಿಯೊಂದು ಅವಧಿಯಲ್ಲೂ ಈಗಿನ ಸಮಾಜಕ್ಕೆ ತಕ್ಕ ಕಲೆ ರೂಪಿತವಾಗಬೇಕು ಎಂಬ ಕೂಗು ಕೆಲವು ಪ್ರಗತಿಶೀಲರಿಂದ ಕೇಳಿಬರುತ್ತದೆ. ಆದರೆ ಕಲೆ ಬೇರ್ಪಡುವುದಕ್ಕೆ ಪ್ರಾರಂಭಿಸುವ ಮುನ್ನವೇ ಮುಂದಣ ಅವಧಿ ಬಂದೇ ಬಿಡುತ್ತದೆ. ಮತ್ತೆ ಅದೇ ತೆರನಾದ ಕೂಗು. ಅಲ್ಲೊಂದು ಇಲ್ಲೊಂದು ಸಣ್ಣ ಸಣ್ಣ ಗುಂಪುಗಳು ತಮ್ಮವೇ ಆದ ಕಲಾಕ್ರಮಗಳನ್ನು ಹೊರತರುತ್ತವೆ. ಆದರೆ ಅದು ಕೇವಲ ವೈಯಕ್ತಿಕ, ಕ್ಷಣಿಕ.

ಕಾಲ, ಪರಿಸ್ಥಿತಿ, ವಾತಾವರಣ-ಇವು ಕಲೆಗಾರನಿಗೆ ಹಿನ್ನಲೆಯೆಂಬುದು ನಿರ್ವಿವಾದ. ಆದರೆ ಅವುಗಳ ಪ್ರಭಾವದ ಪ್ರಮಾಣವೆಷ್ಟು, ಕಲೆಗಾರನ ಸ್ವಂತ ವ್ಯಕ್ತಿತ್ವದ ಪ್ರಮಾಣವೇನು ಎಂಬ ವಿಚಾರವಾಗಿ ಒಪ್ಪತಕ್ಕ ನಿರ್ಧಾರವನ್ನು ಹೇಳುವುದು ಬಹಳ ಕಷ್ಟ. ಹಿನ್ನೆಲೆಯ ಪ್ರಭಾವ ಕಲೆಗಾರನ ಮೇಲೆ ಸ್ಫುಟ ಮುದ್ರೆಯನ್ನು ಒತ್ತುವುದಿಲ್ಲ; ಅವು ಅವನೊಳಗೆ ಸೇರಿಕೊಂಡು ಅರಿವಿಲ್ಲದೆಯೇ ಪ್ರಭಾವ ಬೀರುತ್ತವೆ. ಇತರ ಕಲೆಗಳಿಗಿಂತಲೂ ಹೆಚ್ಚಾಗಿ ಸಾಹಿತ್ಯ ಸಮಾಜದೊಂದಿಗೆ ಮಿಳಿತವಾಗಿದೆ. 	(ಎಸ್.ವಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ